ಮೂಡುಬಿದಿರೆ: ತಾಲೂಕು ಬೀಡಿ ಕೆಲಸಗಾರರ ಸಂಘ ಹಾಗೂ ಕರ್ನಾಟಕ ಋಣಮುಕ್ತ ಹೋರಾಟ ಮೂಡುಬಿದಿರೆ ಸಮಿತಿ ಆಶ್ರಯದಲ್ಲಿ ಬೀಡಿ ಕಾರ್ಮಿಕರ ಬೃಹತ್ ಸಮಾವೇಶ ಮೂಡುಬಿದಿರೆ ಸ್ವರ್ಣ ಮಂದಿರದಲ್ಲಿ ಶನಿವಾರ ನಡೆಯಿತು.
ಬೀಡಿ ಕೆಲಸಗಾರರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಬಿ.ಎಂ.ಭಟ್ ಮಾತನಾಡಿ, ಐದು ವರ್ಷಗಳಿಗಿಂತ ಹೆಚ್ಚುಕಾಲ ಬೀಡಿ ಕಾರ್ಮಿಕರಾಗಿ ದುಡಿದು ಕೆಲಸ ಬಿಟ್ಟರೆ ಅವರಿಗೆ ಗ್ರಾಚ್ಯುವಿಟಿ ಸೌಲಭ್ಯವಿದೆ. ಆದರೆ, ಬೀಡಿ ಕಂಪೆನಿ ಮಾಲಕರು ಈ ಗ್ರಾಚ್ಯುವಿಟಿ ನೀಡದೆ ನಿರಂತರ ಮೋಸ ಮಾಡುತ್ತಿದ್ದಾರೆ. 2015ರ ಏಪ್ರಿಲ್ 1ರಿಂದ ನಿರಂತರ ಮೂರು ವರ್ಷಗಳ ತುಟ್ಟಿಭತ್ಯೆ ಪ್ರತಿ ಕಾರ್ಮಿಕರಿಗೆ ತಲಾ 11,934 ರೂ. ಬೀಡಿ ಕಾರ್ಮಿಕರಿಗೆ ನೀಡದೆ ವಂಚನೆ ಮಾಡುತ್ತಿದ್ದಾರೆ. ಸರ್ಕಾರ ನಿಗದಿಗೊಳಿಸಿದ ವೇತನ ಡಿ.ಎ. ಸೇರಿ ಇಂದು ಪ್ರತಿ ಸಾವಿರ ಬೀಡಿಗೆ 240.92 ಆಗಿದೆ. ಆದರೆ, ಇದನ್ನು ಮಾಲಕರು ನೀಡುತ್ತಿಲ್ಲ. ಇದಕ್ಕಾಗಿ ಹೋರಾಟ ನಡೆಯುತ್ತಿದ್ದು, ಮಾಲಕರ ವಿರುದ್ದ ಕೇಸನ್ನು ದಾಖಲಿಸಲಾಗಿದೆ ಎಂದರು.
ಸಿಐಟಿಸಿ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಮಂಜುನಾಥ್, ಬೀಡಿ ಕೆಲಸಗಾರರ ಸಂಘದ ಮೂಡುಬಿದಿರೆ ತಾಲೂಕು ಅಧ್ಯಕ್ಷೆ ರಾಧಾ, ಕಾರ್ಯದರ್ಶಿ ಲೋಕೇಶ್, ಋಣಮುಕ್ತ ಹೋರಾಟ ಸಮಿತಿಯ ಮೂಡುಬಿದಿರೆ ತಾಲೂಕು ಅಧ್ಯಕ್ಷೆ ವಿನೋದಾ, ಸಂಚಾಲಕಿ ಗೀತಾ, ಪ್ರಧಾನ ಸಂಚಾಲಕ ಆಸೀಫ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
28/11/2020 09:05 pm