ಬಂಟ್ವಾಳ: ಮುಂದಿನ ಅಧಿವೇಶನದಲ್ಲಿ ಲವ್ ಜಿಹಾದ್ ತಡೆಗೆ ಕಾನೂನು ರೂಪಿಸಲಾಗುತ್ತದೆ. ಗೋಹತ್ಯೆ ನಿಷೇಧ, ಕರಾವಳಿಗೆ ಸ್ಪಷ್ಟ ಮರಳುನೀತಿ, ಜಿಲ್ಲೆಯಲ್ಲಿರುವ ರೈತರ ರಕ್ಷಣೆಗೆ ಕುಮ್ಕಿ ಹಕ್ಕು ರೈತನಿಗೆ ದೊರಕುವಂತೆ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಮಾಡಲಿದ್ದು, ಪ್ರತಿಯೊಂದು ಪಂಚಾಯತ್ ಗಳಲ್ಲಿ ಬಿಜೆಪಿ ಬೆಂಬಲಿತರು ಗೆಲ್ಲಬೇಕಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಬಂಟ್ವಾಳ, ಮೂಡುಬಿದಿರೆ, ಮಂಗಳೂರು, ಮಂಗಳೂರು ನಗರ ಉತ್ತರ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟ ಬಿಜೆಪಿ ಗ್ರಾಮ ಸ್ವರಾಜ್ಯ ಸಮಾವೇಶದಲ್ಲಿ ಅವರು ಮಾತನಾಡಿದರು.
ಪ್ರತಿಯೊಂದು ಪಂಚಾಯಿತಿಗೆ ಒಂದರಿಂದ 2 ಕೋಟಿ ರೂಗಳಷ್ಟು ಅನುದಾನ ಬರಲಿದೆ. ಗ್ರಾಮಪಂಚಾಯತ್ ಅಧ್ಯಕ್ಷರು ಪ್ರಧಾನಿಯಷ್ಟೇ ಪವರ್ ಫುಲ್ ಆಗಲಿದ್ದಾರೆ ಎಂದರು. ದೇಶವಿರೋಧಿ ಕೃತ್ಯಗಳನ್ನು ಬಿಜೆಪಿಬಸಹಿಸುವುದಿಲ್ಲ. ಮಂಗಳೂರಿನಲ್ಲಿ ಕಿಡಿಗೇಡಿಗಳು ಬರೆದ ದೇಶದ್ರೋಹಿ ಗೋಡೆಬರಹ ಕ್ಕೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸುವಂತೆ ಗೃಹಸಚಿವರು ಸೂಚನೆ ನೀಡಿದ್ದಾರೆ ಎಂದರು.
ತುಷ್ಟೀಕರಣ ನೀತಿಯಿಂದಾಗಿ ಕಾಂಗ್ರೆಸ್ ಇಂದು ಮೂಲೆಗುಂಪಾಗಿದ್ದು, ಗ್ರಾಮಗಳಲ್ಲಿ ನಿಜವಾದ ಸ್ವರಾಜ್ಯ ಮೂಡಿಬರಲು ಬಿಜೆಪಿ ಅಧಿಕಾರಕ್ಕೆ ಬರುವುದು ಅನಿವಾರ್ಯವಾಗಿದೆ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿದ ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಬಿಜೆಪಿ ಈಗ ಗೆಲ್ಲುವ ಪಾರ್ಟಿ ಆಗಿದೆ, ನಮ್ಮ ವಿಚಾರ ಧಾರೆ ಯನ್ನು ಒಪ್ಪಿ ಹೊಸ ನೀರು ಬಂದ ಕಾರಣದಿಂದಲೇ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ, ಕೇಂದ್ರದಲ್ಲೂ ಶಕ್ತಿಯುತವಾಗಿದೆ. ಗ್ರಾಮಮಟ್ಟದಲ್ಲೂ ಇಂತಹಾ ಕ್ರಾಂತಿಯಾಗಬೇಕಿದೆ ಎಂದರು.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ಕೋಲಾರ ಸಂಸದ ಮುನಿಸ್ವಾಮಿ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಶಾಸಕರಾದ ಉಮಾನಾಥ ಕೋಟ್ಯಾನ್, ಡಾ. ವೈ. ಭರತ್ ಶೆಟ್ಟಿ, ವೇದವ್ಯಾಸ ಕಾಮತ್ ಮಾತನಾಡಿದರು.
ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ವಿಧಾನಪರಿಷತ್ತು ಸದಸ್ಯ ಪ್ರತಾಪ್ ಸಿಂಹ ನಾಯಕ್, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ. ಅಧ್ಯಕ್ಷ ಸಂತೋಷ್ ಕುಮಾರ್ ಬೋಳ್ಯಾರ್, ಪಕ್ಷ ಪ್ರಮುಖರಾದ ಉದಯಕುಮಾರ್ ಶೆಟ್ಟಿ, ಗೋಪಾಲಕೃಷ್ಣ ಹೇರಳೆ ಸಹಿತ ಪ್ರಮುಖರು ಉಪಸ್ಥಿತರಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು. ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ ವಂದೇ ಮಾತರಂ ಹಾಡಿದರು. ಬಿಜೆಪಿ ಬಂಟ್ವಾಳ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ ಸ್ವಾಗತಿಸಿದರು. ಮೂಡುಬಿದಿರೆ ಕ್ಷೇತ್ರಾಧ್ಯಕ್ಷ ಸುನಿಲ್ ಆಳ್ವ ವಂದಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು.
Kshetra Samachara
28/11/2020 04:09 pm