ಬಂಟ್ವಾಳ: ಲಯನ್ಸ್ ಕ್ಲಬ್ ಪ್ರಾಂತೀಯ ಸಮ್ಮೇಳನ – ಪುನರ್ ಜನ್ಮ ನೆನಪಿಗೆ ಬಂಟ್ವಾಳ ಸರ್ಕಾರಿ ಸಮುದಾಯ ಆಸ್ಪತ್ರೆಗೆ ಶಾಶ್ವತ ಯೋಜನೆಯ ಸಮರ್ಪಣಾ ಕಾರ್ಯ ನಡೆಯಲಿದ್ದು, ಆಸ್ಪತ್ರೆಗೆ ಶವ ಶೈತ್ಯಾಗಾರವನ್ನು ಲಯನ್ಸ್ ವತಿಯಿಂದ ಕೊಡುಗೆಯಾಗಿ ನೀಡಲಾಗುತ್ತದೆ. ನ.29ರಂದು ಮಧ್ಯಾಹ್ನ 3.30ಕ್ಕೆ ಸರ್ಕಾರಿ ಸಮುದಾಯ ಆಸ್ಪತ್ರೆಯಲ್ಲಿ ಸಮರ್ಪಣೆ ನಡೆಯಲಿದ್ದು, ಬಳಿಕ ಸಭಾ ಕಾರ್ಯಕ್ರಮ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಲಿದೆ ಎಂದು ಲಯನ್ಸ್ ಸೇವಾ ಸಂಸ್ಥೆ ಜಿಲ್ಲೆ 317 ಡಿ ಪ್ರಾಂತ್ಯ 2ರ ಪ್ರಾಂತೀಯ ಅಧ್ಯಕ್ಷ ಸಂಜೀವ ಬಿ.ಶೆಟ್ಟಿ ಹೇಳಿದ್ದಾರೆ.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜಿಲ್ಲಾ ಗವರ್ನರ್ ಡಾ. ಗೀತಪ್ರಕಾಶ್ ಉದ್ಘಾಟಿಸಲಿದ್ದು, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ದೀಪ ಪ್ರಜ್ವಲನೆ ನಡೆಸುವರು.
ಅಧ್ಯಕ್ಷತೆಯನ್ನು ಲಯನ್ಸ್ ಪ್ರಾಂತೀಯ ಅಧ್ಯಕ್ಷ ಸಂಜೀವ ಬಿ.ಶೆಟ್ಟಿ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಬಿ.ರಮಾನಾಥ ರೈ, ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್, ಮಾಜಿ ಗವರ್ನರ್ ಹರಿಕೃಷ್ಣ ಪುನರೂರು, ತಹಸೀಲ್ದಾರ್ ರಶ್ಮಿ ಎಸ್.ಆರ್., ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ಭಾಗವಹಿಸುವರು.
ಲಯನ್ಸ್ ಜಿಲ್ಲೆ ಪ್ರಥಮ ಉಪರಾಜ್ಯಪಾಲ ವಸಂತ ಕುಮಾರ್ ಶೆಟ್ಟಿ, ದ್ವಿತೀಯ ಉಪರಾಜ್ಯಪಾಲ ಸಂಜೀತ್ ಶೆಟ್ಟಿ ಮತ್ತು ಲಯನ್ಸ್ ಕ್ಲಬ್ ಬಂಟ್ವಾಳ ಅಧ್ಯಕ್ಷ ಕೃಷ್ಣಶ್ಯಾಮ್ ಉಪಸ್ಥಿತರಿರುವರು ಎಂದರು. ಸುಮಾರು 6.5 ಲಕ್ಷ ರೂ. ವೆಚ್ಚದ 4 ಶವ ಶೈತ್ಯಾಗಾರ ನೀಡಲು ಉದ್ದೇಶಿಸಲಾಗಿದ್ದು, ಮೊದಲ ಹಂತದಲ್ಲಿ ಎರಡನ್ನು ಒದಗಿಸಲಾಗುವುದು. ಫೆ.14ರಂದು ನಡೆಯುವ ಪ್ರಾಂತೀಯ ಸಮ್ಮೇಳನದಲ್ಲಿ ಇನ್ನೆರಡನ್ನು ನೀಡಲಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಲಯಾಧ್ಯಕ್ಷ ಮನೋರಂಜನ್ ಕೆ.ಆರ್., ಲಯನ್ಸ್ ಪ್ರಾಂತೀಯ ಸಮ್ಮೇಳನ ಸಮಿತಿ ಅಧ್ಯಕ್ಷ ಎನ್.ಸತೀಶ್ ಕುಡ್ವ, ಕಾರ್ಯದರ್ಶಿ ಮಧ್ವರಾಜ್ ಬಿ.ಕಲ್ಮಾಡಿ, ಕೋಶಾಧಿಕಾರಿ ಸುನೀಲ್ ಬಿ., ಕಾರ್ಯಕ್ರಮ ಸಂಯೋಜಕ ಬಿ.ಶಿವಾನಂದ ಬಾಳಿಗ, ಶಾಶ್ವತ ಯೋಜನೆ ಸಂಯೋಜಕ ಉಮೇಶ್ ಆಚಾರ್, ಪ್ರಮುಖರಾದ ಜಯಂತ್ ಶೆಟ್ಟಿ ಉಪಸ್ಥಿತರಿದ್ದರು.
Kshetra Samachara
25/11/2020 09:04 pm