ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಜೊತೆಗಿನ 'ಅದಾನಿ ಏರ್ ಪೋರ್ಟ್' ಹೆಸರನ್ನ ತೆಗೆದು ಹಾಕಿಸುವ ನಿಟ್ಟಿನಲ್ಲಿ ನಾವು ಕಾನೂನು ಹೋರಾಟಕ್ಕೂ ಸನ್ನದ್ಧರಾಗಿದ್ದೀವಿ ಅಂತಾ ಸಾಮಾಜಿಕ ಕಾರ್ಯಕರ್ತ ದಿಲ್ ರಾಜ್ ಆಳ್ವ ತಿಳಿಸಿದ್ದಾರೆ. 'ಅದಾನಿ ಏರ್ ಪೋರ್ಟ್' ನಾಮಕರಣ ವಿಚಾರಕ್ಕೆ ಸಂಬಂಧಪಟ್ಟಂತೆ ಸಮಾನ ಮನಸ್ಕರು ಸೇರಿ ನಡೆಸಿದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, "ವಿಮಾನ ನಿಲ್ದಾಣ ಖಾಸಗೀಕರಣಕ್ಕೆ ನಮ್ಮ ವಿರೋಧವಿಲ್ಲ. ಆದರೆ 'ಅದಾನಿ ಏರ್ ಪೋರ್ಟ್' ಅನ್ನೋ ನಾಮಕರಣಕ್ಕೆ ನಮ್ಮ ವಿರೋಧವಿದೆ. ತುಳುನಾಡಿನ ಜನರು ನೀಡಿದ ಭೂಮಿಯಲ್ಲಿ ನಿರ್ಮಾಣವಾದ ವಿಮಾನ ನಿಲ್ದಾಣಕ್ಕೆ 'ಅದಾನಿ ಕಂಪೆನಿ' ಹೆಸರು ಒಪ್ಪತಕ್ಕದಲ್ಲ. ಇದು ಜನರಿಗೆ ತಪ್ಪು ಸಂದೇಶ ಕೊಡುತ್ತದೆ. ಆದ್ದರಿಂದ ರಾಜಕಾರಣಿಗಳು ತಮ್ಮ ರಾಜಕೀಯ ಲೆಕ್ಕಚಾರ ಬದಿಗಿರಿಸಿ ಎಲ್ಲರೂ ಒಪ್ಪುವಂತ 'ತುಳುನಾಡು ಇಂಟರ್ ನ್ಯಾಶನಲ್ ಏರ್ ಪೋರ್ಟ್' ಹೆಸರಿಗೆ ಬದ್ಧರಾದರೆ ಉತ್ತಮ. ಇದರಿಂದ ಮುಂದಿನ ದಿನಗಳಲ್ಲಿ ತುಳುನಾಡಿನ ಅಸ್ತಿತ್ವದ ಜೊತೆಗೆ ತುಳು ಭಾಷೆಯನ್ನ ಸಂವಿಧಾನದ 8 ನೇ ಪರಿಚ್ಛೇದಕ್ಕೆ ಸೇರಿಸಲು ಸುಲಭವಾದೀತು ಎಂದರು.
ಅಲ್ಲದೇ, ನಮ್ಮದು ರಾಜಕೀಯ ರಹಿತ ಹೋರಾಟ. ತುಳುನಾಡಿನ ಯುವಕರನ್ನ ಕಟ್ಟಿಕೊಂಡು ನಡೆಸುವ ಹೋರಾಟ. ಸ್ಥಳೀಯರನ್ನ ಕಡೆಗಣಿಸುವ ಅದಾನಿ ಕಂಪೆನಿ ಧೋರಣೆ ವಿರುದ್ಧದ ಹೋರಾಟ ಎಂದರು.
ಇನ್ನು ಸಾಮಾಜಿಕ ಕಾರ್ಯಕರ್ತ ಉಮಾನಾಥ ಕೋಟೆಕಾರ್ ಮಾತನಾಡಿ, ಅದಾನಿ ಕಂಪೆನಿಗೆ ಗುತ್ತಿಗೆ ವಹಿಸಿಕೊಡುತ್ತಲೇ ಸ್ಥಳೀಯ ಉದ್ಯೋಗಿಗಳಿಗೆ ಉದ್ಯೋಗ ಕಳೆದುಕೊಳ್ಳುವ ಆತಂಕ ಎದುರಾಗಿದೆ. ರೈಲ್ವೇ ನಿಲ್ದಾಣದಂತೆ ಇಲ್ಲೂ ಹೊರರಾಜ್ಯದ ಭಾಷಿಕರೇ ತುಂಬಿ ನಮ್ಮಅಸ್ತಿತ್ವವನ್ನ ಕಳೆದುಕೊಳ್ಳುವ ಆತಂಕವೂ ಇದೆ ಎಂದರು. ಸುದ್ದಿಗೋಷ್ಟಿಯಲ್ಲಿ ಕೌಶಿಕ್ ಶೆಟ್ಟಿ, ರಿತೇಶ್ ಡಿಸೋಜಾ ಪಸ್ಥಿತರಿದ್ದರು.
Kshetra Samachara
21/11/2020 02:34 pm