ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಶಾಸಕರ ಮನೆಯಲ್ಲಿ ಪಕ್ಷದ ಸಭೆಗೆ ವಿರೋಧ: ಬೈಂದೂರು ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ!?

ಕುಂದಾಪುರ: ಬಿಎಮ್ ಸುಕುಮಾರ್ ಶೆಟ್ಟಿಯವರು ಶಾಸಕರಾದ ಬಳಿಕ ಬೈಂದೂರು ಬಿಜೆಪಿ ನಾಯಕರೊಳಗೆ ಸ್ವಲ್ಪ ಮಟ್ಟಿಗೆ ಹೊಗೆಯಾಡುತ್ತಿದ್ದ ಭಿನ್ನಮತ ಇದೀಗ ಇನ್ನಷ್ಟು ಬಹಿರಂಗವಾಗಿ ಸ್ಫೋಟಗೊಂಡಿದೆ.

ಶಾಸಕರ ನಿವಾಸದಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣಾ ಪೂರ್ವ ತಯಾರಿ ಸಭೆಗೆ ಬಹುತೇಕ ಬೈಂದೂರು ತಾ.ಪಂ ಸದಸ್ಯರು ಗೈರಾಗುವ ಮೂಲಕ ಪಕ್ಷದಲ್ಲಿ ಹೊಗೆಯಾಡುತ್ತಿದ್ದ ಭಿನ್ನಮತಕ್ಕೆ ಮತ್ತಷ್ಟು ಪುಷ್ಠಿ ನೀಡಿದ್ದಾರೆ.

ಶಾಸಕರ ನೆಂಪು ನಿವಾಸದಲ್ಲಿ ನಡೆದ ಚುನಾವಣಾ ಪೂರ್ವ ತಯಾರಿ ಸಭೆಗೆ ಬೈಂದೂರು ತಾ.ಪಂ ಅಧ್ಯಕ್ಷ ಮಹೇಂದ್ರ ಪೂಜಾರಿ ಸೇರಿದಂತೆ ಒಟ್ಟು ಒಂಭತ್ತು ಬಿಜೆಪಿ ಬೆಂಬಲಿತ ತಾ.ಪಂ ಸದಸ್ಯರ ಪೈಕಿ ಕೇವಲ ಈರ್ವರು ಮಹಿಳಾ ತಾ.ಪಂ ಸದಸ್ಯರು ಭಾಗವಹಿಸಿದ್ದು, ಉಳಿದ ಏಳು ಮಂದಿ ತಾ.ಪಂ ಸದಸ್ಯರು ಗೈರಾಗಿದ್ದಾರೆ. ಬೈಂದೂರು ಬಿಜೆಪಿಯ ಪ್ರಭಾವಿ ನಾಯಕ, ಜಿಲ್ಲಾ ಪಂಚಾಯಿತಿ ಸದಸ್ಯ ಬಾಬು ಹೆಗ್ಡೆಯವರ ಗೈರು ಕೂಡ ಪಕ್ಷದೊಳಗೆ ನಾಯಕರ ಮಧ್ಯೆ ನಡೆಯುತ್ತಿರುವ ಮುಸುಕಿನ ಗುದ್ದಾಟ ಕೊನೆಗೂ ಬಹಿರಂಗಗೊಂಡಿದೆ.

ಪಕ್ಷದ ಎಲ್ಲಾ ಸಭೆಗಳನ್ನು ಶಾಸಕರ ಮನೆಯಲ್ಲಿ ನಡೆಸುವ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿಯವರ ನಡೆಗೆ ಈ ಹಿಂದೆಯೂ ಸಾಕಷ್ಟು ಪ್ರತಿರೋಧಗಳು ವ್ಯಕ್ತವಾಗಿದ್ದವು. ಆದರೂ ಕೂಡ ಶಾಸಕರು ಚುನಾವಣಾ ಪೂರ್ವ ತಯಾರಿ ಸಭೆಯನ್ನು ಮತ್ತೆ ತಮ್ಮ ನಿವಾಸದಲ್ಲಿ ಆಯೋಜಿಸಿರುವುದನ್ನು ವಿರೋಧಿಸಿ ಕೆಲ ಬಿಜೆಪಿ ಮುಖಂಡರು ಸಭೆಗೆ ಗೈರಾಗುವ ಮೂಲಕ ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

18/11/2020 09:44 am

Cinque Terre

21.65 K

Cinque Terre

3