ಮುಲ್ಕಿ: ಮುಲ್ಕಿ ನ.ಪಂ. ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆಗೆ ಶುಕ್ರವಾರ ಚುನಾವಣೆ ನಡೆದಿದ್ದು, ಅಧ್ಯಕ್ಷರಾಗಿ ಬಿಜೆಪಿ ಯ ಸುಭಾಷ್ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಬಿಜೆಪಿಯವರೇ ಆದ ಸತೀಶ್ ಅಂಚನ್, ಕಾಂಗ್ರೆಸ್ ನ ಪುತ್ತುಬಾವ ಅವರನ್ನು ಸೋಲಿಸಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿ ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.
ಮುಲ್ಕಿ ನಪಂ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಬಿ ಮೀಸಲಾಗಿದ್ದು, ಅದರಂತೆ 9 ಸ್ಥಾನ ಗಳಿಸಿರುವ ಕಾಂಗ್ರೆಸ್ ನಲ್ಲಿ ಯಾವುದೇ ಅಭ್ಯರ್ಥಿಗಳು ಇಲ್ಲದ ಕಾರಣ ಬಿಜೆಪಿಯ ಸುಭಾಷ್ ಶೆಟ್ಟಿ ನಾಮಪತ್ರ ಸಲ್ಲಿಸಿದ್ದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಗೆ ಮೀಸಲಾಗಿದ್ದು ಬಿಜೆಪಿಯಿಂದ ಸತೀಶ್ ಅಂಚನ್ ಹಾಗೂ ಕಾಂಗ್ರೆಸ್ ನಿಂದ ಪುತ್ತುಬಾವ ನಾಮಪತ್ರ ಸಲ್ಲಿಸಿದ್ದು, ಕೆಲ ನಾಟಕೀಯ ಬೆಳವಣಿಗೆಯಲ್ಲಿ ಜೆಡಿಎಸ್ ನ ಓರ್ವ ಸದಸ್ಯೆ ಬಾರದ ಕಾರಣ ಮತದಾನ ನಡೆದಿದ್ದು, ಶಾಸಕ, ಸಂಸದರ ಮತದಿಂದ 10 -9 ಮತಗಳ ಅಂತರದಿಂದ ಬಿಜೆಪಿಯ ಸತೀಶ್ ಅಂಚನ್ ಆಯ್ಕೆಯಾಗಿದ್ದಾರೆ.
ಕೆಲವು ತಿಂಗಳ ಹಿಂದೆ ಮುಲ್ಕಿ ನ.ಪಂ.ಗೆ ಚುನಾವಣೆ ನಡೆದಿದ್ದು, 18 ಸ್ಥಾನಗಳಲ್ಲಿ 9 ಸ್ಥಾನ ಕಾಂಗ್ರೆಸ್ ಪಡೆದಿದ್ದರೆ, 8 ಬಿಜೆಪಿ ಹಾಗೂ 1 ಸ್ಥಾನ ಜೆಡಿಎಸ್ ಪಡೆದಿತ್ತು. ಬಳಿಕ ಕಾಂಗ್ರೆಸ್, ಬಿಜೆಪಿ ಅಧಿಕಾರಕ್ಕಾಗಿ ಹಗ್ಗ ಜಗ್ಗಾಟ ನಡೆಸಿದ್ದವು. ಆದರೆ, ಮೀಸಲಾತಿ ನಿಯಮ ಹಾಗೂ ಕೊರೊನಾದಿಂದಾಗಿ ಸರಕಾರ ಆಡಳಿತಾಧಿಕಾರಿ ನೇಮಕ ಮಾಡಿತ್ತು. ಇದೀಗ ಬಿಜೆಪಿ ಸರಕಾರ ನೂತನ ಮೀಸಲಾತಿ ನಿಯಮ ಪ್ರಕಟಿಸಿದ್ದು, ಕಾಂಗ್ರೆಸ್ ಅಧಿಕ 9 ಸ್ಥಾನ ಪಡೆದಿದ್ದರೂ ಅಧ್ಯಕ್ಷರ ಸ್ಥಾನಕ್ಕೆ ಪಕ್ಷದಲ್ಲಿ ಸೂಕ್ತ ಅಭ್ಯರ್ಥಿ ಇಲ್ಲದೆ ನಿರಾಶೆ ಮೂಡಿತ್ತು. ಮುಲ್ಕಿ ನ.ಪಂ. ಅಧ್ಯಕ್ಷರಾಗಿ ಎಳೆ ವಯಸ್ಸಿನಲ್ಲಿಯೇ ಆಯ್ಕೆಯಾದ ಸುಭಾಷ್ ಶೆಟ್ಟಿ ಮೂಲತಃ ಕೃಷಿಕರು. ನ.ಪಂ. ಮೂರನೇ ಮಾನಂಪಾಡಿ ವಾರ್ಡ್ ನಲ್ಲಿ ಪ್ರಥಮ ಚುನಾವಣೆಯಲ್ಲಿಯೇ ಆಯ್ಕೆಯಾದ ಕೀರ್ತಿ ಇವರದು. ಹಿರಿಯ ಕೃಷಿಕ ಶಿವಣ್ಣ ಶೆಟ್ಟಿ -ರತಿ ಶೆಟ್ಟಿಯವರ ಮೂರನೇ ಪುತ್ರ ಸುಭಾಷ್ ಶೆಟ್ಟಿ, ಕಟೀಲು ಕಾಲೇಜಿನಲ್ಲಿ ಪಿಯುಸಿ ಕಲಿತು' ಬಳಿಕ ಕೃಷಿಯಲ್ಲಿ ತೊಡಗಿದ್ದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಅಭಿನಂದಿಸಿ ಮಾತನಾಡಿ, ಕೇಂದ್ರ, ರಾಜ್ಯ ಹಾಗೂ ಜಿಲ್ಲೆಯಲ್ಲಿ ಬಿಜೆಪಿ ಆಡಳಿತವಿದ್ದು, ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು. ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಮುಲ್ಕಿ ನಪಂ ಅಭಿವೃದ್ಧಿಯಲ್ಲಿ ಯಾವುದೇ ರಾಜಕೀಯ ಮಾಡದೆ ಉತ್ತಮ ಆಡಳಿತ ನೀಡಲು ಬಿಜೆಪಿ ಬದ್ಧ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಮುಲ್ಕಿ-ಮೂಡಬಿದ್ರೆ ಬಿಜೆಪಿ ಮಂಡಲ ಅಧ್ಯಕ್ಷ ಸುನಿಲ್ ಆಳ್ವ, ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ, ಮತ್ತಿತರರಿದ್ದರು.
ಮುಲ್ಕಿನ.ಪಂ. ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕ ಸ್ಥಾನಗಳನ್ನು ಪಡೆದು ಜನಾದೇಶ ಇದ್ದರೂ ಬಿಜೆಪಿ ತನ್ನ ಕುತಂತ್ರದಿಂದ ಅಧಿಕಾರ ಪಟ್ಟ ಕಸಿದುಕೊಂಡಿದೆ ಎಂದು ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಮಾಧ್ಯಮದೊಂದಿಗೆ ಮಾತನಾಡಿ ಬಿಜೆಪಿ ಹಿಂಬಾಗಿಲ ಮೂಲಕ ಅಧಿಕಾರ ದುರುಪಯೋಗಪಡಿಸಿ ಜೆಡಿಎಸ್ ಸದಸ್ಯರನ್ನು ಹಣದ ಆಮಿಷ ಒಡ್ಡಿ ಚುನಾವಣೆಗೆ ಬರದ ಹಾಗೆ ನೋಡಿಕೊಂಡಿದ್ದಾರೆ. ಇದಕ್ಕೆ ಮುಂದಿನ ದಿನಗಳಲ್ಲಿ ಜನರೇ ಉತ್ತರಿಸಲಿದ್ದಾರೆ ಎಂದರು.
Kshetra Samachara
06/11/2020 08:08 pm