ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮರದ ಸಾಮಗ್ರಿ ತಯಾರಿಸುವ ಫರ್ನಿಚರ್ ಕ್ಲಸ್ಟರ್ ಆರಂಭಿಸಲು ಸೂಕ್ತ ಜಾಗವನ್ನು ಗುರುತಿಸುವಂತೆ ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.
ಉಡುಪಿ ಜಿಪಂ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲೆಯ ಕೈಗಾರಿಕಾಭಿವೃದ್ದಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯದಲ್ಲಿ ಈಗಾಗಲೇ ಕೈಗಾರಿಕೆ ಅಭಿವೃದ್ಧಿಗಾಗಿ ವಿವಿಧ ಕ್ಲಸ್ಟರ್‌ಗಳನ್ನು ಆರಂಭಿಸಲು ಸೂಚನೆ ನೀಡಿದ್ದು, ಕೊಪ್ಪಳದಲ್ಲಿ ಆಟಿಕೆ ತಯಾರಿಕಾ ಕ್ಲಸ್ಟರ್ ಮತ್ತು ಯಾದಗಿರಿ-ರಾಯಚೂರಿನಲ್ಲಿ ಫಾರ್ಮಾ ಕ್ಲಸ್ಟರ್ ಆರಂಭ ಕುರಿತಂತೆ ಕಾರ್ಯ ನಡೆಯುತ್ತಿವೆ. ಉಡುಪಿ ಜಿಲ್ಲೆಯಲ್ಲಿ ಬಂದರು ಇರುವ ಕಾರಣ ವಿದೇಶಗಳಿಂದ ಉತ್ತಮ ಗುಣಮಟ್ಟದ ಮರಗಳನ್ನು ಆಮದು ಮಾಡಿಕೊಳ್ಳಲು ಮತ್ತು ತಯಾರಿಸಿದ ಪೀಠೋಪಕರಣಗಳನ್ನು ರಫ್ತು ಮಾಡಲು ಉತ್ತಮ ಅವಕಾಶಗಳಿದ್ದು, ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ದೊರೆಯಲಿದ್ದು, ಇದಕ್ಕಾಗಿ ಅಗತ್ಯ ಪ್ರಮಾಣದ ಭೂಮಿಯನ್ನು ಗುರುತಿಸುವಂತೆ ತಿಳಿಸಿದ ಸಚಿವರು, ಕ್ಲಸ್ಟರ್ ಆರಂಭಕ್ಕೆ ಸರಕಾರದಿಂದ ಎಲ್ಲಾ ರೀತಿಯ ಅಗತ್ಯ ನೆರವು ನೀಡಲಾಗುವುದು ಎಂದರು.
ಉಡುಪಿ ಜಿಲ್ಲೆಯ ನಂದಿಕೂರು ಸೇರಿದಂತೆ ವಿವಿಧ ಕೈಗಾರಿಕಾ ಪ್ರದೇಶದಲ್ಲಿ ಉದ್ದಿಮೆ ಆರಂಭಿಸಲು ಕೈಗಾರಿಕೆಗಳು ಪಡೆದಿರುವ ಭೂಮಿಯು ಸಂಪೂರ್ಣ ಬಳಕೆಯಾಗಿರುವ ಬಗ್ಗೆ ಬೆಂಗಳೂರಿನಿಂದ ತಜ್ಞರ ತಂಡದಿಂದ ಪರಿಶೀಲಿಸಿ, ಅವರ ಮೂಲಕ ವರದಿ ಪಡೆಯಲಾಗುವುದು. ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ನೀಡುವಂತೆ ಹಾಗೂ ಸರೋಜಿನಿ ಮಹಿಷಿ ವರದಿಯನ್ನು ಸಮರ್ಪಕವಾಗಿ ಅನುಷ್ಠಾನಿಸುವಂತೆ ಕೈಗಾರಿಕೋದ್ಯಮಿಗಳಿಗೆ ಸೂಚಿಸಿದರು.
Kshetra Samachara
06/11/2020 07:17 pm