ಮೂಡುಬಿದಿರೆ: ಅಗತ್ಯವಿರುವ ಗ್ರಾಮಪಂಚಾಯಿತಿಗಳಿಗೆ ಕಚೇರಿ, ಪಂಚಾಯಿತಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸೂಕ್ತವಾದ ಜಾಗವನ್ನು ಪಿಡಿಓ ಹಾಗೂ ಗ್ರಾಮ ಕರಣೀಕರು ಪರಸ್ಪರ ಸಮನ್ವಯದೊಂದಿಗೆ ವಾರದೊಳಗೆ ಗುರುತಿಸಿ ವರದಿ ನೀಡಬೇಕು.
ರಕ್ಷಿತಾರಣ್ಯದ ಸಮಸ್ಯೆಗಳಿದ್ದಲ್ಲಿ ಅರಣ್ಯ ಇಲಾಖೆಯವರು ಸೂಕ್ತ ರೀತಿಯಲ್ಲಿ ಪರಿಶೀಲನೆ ನಡೆಸಿ ತೊಡಕುಗಳನ್ನುನಿವಾರಿಸಿಕೊಡುವಂತೆ ದ.ಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹೇಳಿದರು. ಅವರು ಮಂಗಳವಾರ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ತಾಲೂಕು ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಇರುವೈಲು ಪ್ರದೇಶದಲ್ಲಿ ಅಕ್ರಮ ಮರಗಳುಗಾರಿಕೆ ನಡೆಯುತ್ತಿದೆ. ಕೆಲವೊಂದು ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಂಪು ಕಲ್ಲಿನ ಅನಧಿಕೃತ ಕೋರೆಗಳು ಕಾರ್ಯಾಚರಿಸುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲವಾದ ಖುದ್ದು ದಾಳಿ ನಡೆಸಬೇಕಾಗುತ್ತದೆ. ದಾಳಿಯ ಸಂದರ್ಭದಲ್ಲಿ ಸಂಬಂಧಪಟ್ಟ ಪಂಚಾಯತ್ ವ್ಯಾಪ್ತಿಯ ಪಿಡಿಒ ಹಾಗೂ ಗ್ರಾಮಕರಣೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಖಡಕ್ ಎಚ್ಚರಿಕೆ ನೀಡಿದರು.
ಕುಡಿಯುವ ನೀರಿಗಾಗಿ ಕೊರೆದ ಬೋರ್‍ವೆಲ್‍ಗಳಿಗೆ ವಿದ್ಯುತ್ ಸಂಪರ್ಕ ಸಿಗುತ್ತಿಲ್ಲ. ಹೊಸ ಟ್ರಾನ್ಸ್‍ಫರ್ ಮರ್‍ಗಳಿಗೆ ಪಂಚಾಯತಿಗಳಲ್ಲಿ ಅನುದಾನದ ಕೊರತೆ ಇದೆ ಎಂದು ಪಿಡಿಓಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಈ ಕುರಿತು ಮೆಸ್ಕಾಂ ಎಂಡಿಯವರ ಜತೆ ಸಮಾಲೋಚಿಸುವುದಾಗಿ ಡೀಸಿ ತಿಳಿಸಿದರು.ಬರ ಪರಿಸ್ಥಿತಿಯಲ್ಲಿ ಪಂಚಾಯತಿಯವರು ಖಾಸಗಿ ಜಲಮೂಲಗಳನ್ನು ಬಾಡಿಗೆಗೆ ಪಡೆದು ಜನತೆಗೆ ನೆರವಾಗುವಂತೆ ಪಂಚಾಯತ್ ಮಟ್ಟದಲ್ಲಿ ಸಮಾಲೋಚನೆ ನಡೆಸುವಂತೆ ಅವರು ಸಲಹೆ ನೀಡಿದರು.
ಮಾರುಕಟ್ಟೆ ಸಂಕೀರ್ಣ ಕಾಮಗಾರಿ ಸ್ಥಗಿತವಾಗಿರುವ ವಿಷಯ ಪ್ರಸ್ತಾಪವಾದಾಗ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ವಿಳಂಬವಾಗುತ್ತಿದೆ ಎಂದು ಪುರಸಭಾ ಮುಖ್ಯಾಧಿಕಾರಿ ಇಂದು.ಎಂ ತಿಳಿಸಿದರು. ಈ ಬಗ್ಗೆ ಪ್ರತ್ಯೇಕ ಸಮಾಲೋಚನಾ ಸಭೆ ನಡೆಸುವುದಾಗಿ ಡಿಸಿ ತಿಳಿಸಿದರು.
ಮೂಡುಬಿದಿರೆಯ ವೃತ್ತ ನಿರೀಕ್ಷಕ ದಿನೇಶ್ ಕುಮಾರ್ ಅವರು ಅಕ್ರಮ ಕಸಾಯಿಖಾನೆ, ಡ್ರಗ್ಸ್, ರಸ್ತೆ ಅಪಘಾತಗಳ ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ತಿಳಿಸಿದರು. ಅಕ್ರಮ ಗೋಸಾಗಾಟ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳುವ ಗೋವುಗಳ ಆರೈಕೆಗೆ ಸೂಕ್ತ ವ್ಯವಸ್ಥೆಯ ಕೊರತೆಯಿದ್ದು ಸರಕಾರದ ವತಿಯಿಂದ ಗೋಶಾಲೆ ತೆರೆಯಲು ವಿನಂತಿಸಿದರು.
ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಜಿಪಂ ಸದಸ್ಯ ಕೆ.ಪಿ ಸುಚರಿತ ಶೆಟ್ಟಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ರೇಖಾ ಸಾಲ್ಯಾನ್, ಕ್ರೈಸ್ತ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಜಾಯ್ಲಸ್ ಡಿ ಕೋಸ್ತ, ಎಪಿಎಂ.ಸಿ ಅಧ್ಯಕ್ಷ ಕೆ.ಕೃಷ್ಣರಾಜ್ ಹೆಗ್ಡೆ, ಮೂಡಾ ಅಧ್ಯಕ್ಷ ಮೇಘನಾಥ ಶೆಟ್ಟಿ,ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ದಯಾವತಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
04/11/2020 08:42 pm