ವರದಿ: ಇರ್ಷಾದ್ ಕಿನ್ನಿಗೋಳಿ ಪಬ್ಲಿಕ್ ನೆಕ್ಸ್ಟ್, ಮಂಗಳೂರು
ಮಂಗಳೂರು: ನಾಳೆ ನಡೆಯಲಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಗೆ ಕಡಲತಡಿ ಮಂಗಳೂರು ಸಜ್ಜಾಗಿದೆ. ಈಗಾಗಲೇ ನಗರದತ್ತ ಪ್ರಮುಖ ನಾಯಕರು ಆಗಮಿಸುತ್ತಿದ್ದು, ನಾಳೆಯ ಸಭೆಗೆ ಸಿದ್ಧರಾಗುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತವರಲ್ಲೇ ಕಾರ್ಯಕಾರಿಣಿ ಸಭೆ ನಡೆಯುತ್ತಿರುವುದು ವಿಶೇಷ. ಸಿಎಂ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವರಾದ ಸದಾನಂದ ಗೌಡ, ಪ್ರಹ್ಲಾದ್ ಜೋಶಿ, ಡಿಸಿಎಂ ಗೋವಿಂದ ಕಾರಜೋಳ, ರಾಜ್ಯ ಸಚಿವರಾದ ಆರ್. ಅಶೋಕ್, ಸಿ.ಟಿ. ರವಿ, ಈಶ್ವರಪ್ಪ ಹಾಗೂ ರಾಜ್ಯ ಉಪಾಧ್ಯಕ್ಷರಾದ ವಿಜಯೇಂದ್ರ, ಶೋಭಾ ಕರಂದ್ಲಾಜೆ ಸೇರಿದಂತೆ ಸುಮಾರು 120 ಮಂದಿ ಪ್ರಮುಖರು ಭಾಗವಹಿಸಲಿದ್ದಾರೆ. ನಾಳೆ ದಿನವಿಡೀ ನಡೆಯಲಿರುವ ಸಭೆಯಲ್ಲಿ ಸಾಕಷ್ಟು ಮಹತ್ವದ ವಿಚಾರ ವಿಮರ್ಶೆ, ಚರ್ಚೆಗಳಾಗಲಿವೆ. ಪ್ರಮುಖವಾಗಿ ಮುಂಬರುವ ಪಂಚಾಯತ್ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಬೇಕಾದ ಪಕ್ಷ ಸಂಘಟನೆ ಬಗ್ಗೆ ಪ್ರಮುಖ ಚರ್ಚೆ ನಡೆಯಲಿರುವುದಾಗಿ ಈಗಾಗಲೇ ಬಿಜೆಪಿ ನಾಯಕರು ಮಾಹಿತಿ ನೀಡಿದ್ದಾರೆ.
ಆದರೆ, ಇತ್ತೀಚೆಗೆ ರಾಜ್ಯದಲ್ಲಿ ಉಂಟಾದ ಸಿಎಂ ಸ್ಥಾನ ಕುರಿತಾದ ಗೊಂದಲ, ಸಚಿವರ ಅಸಮಾಧಾನ ಇದೆಲ್ಲಕ್ಕೂ ಈ ಸಭೆಯಲ್ಲಿ ಉತ್ತರ ಕಂಡುಕೊಳ್ಳುವ ಸಾಧ್ಯತೆ ಇದೆ. RSS ಮುಂದಾಳತ್ವದಲ್ಲೇ ಸಭೆ ನಡೆಯುತ್ತಿರುವುದು ಕೂಡ ಕುತೂಹಲ ಹೆಚ್ಚಿಸಿದೆ. ಇನ್ನೊಂದೆಡೆ, ಈ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಕೂಡ ಭಾಗವಹಿಸಲಿದ್ದು, ಸಹಜವಾಗಿ ಹಲವು ಆಯಾಮಗಳ ಚರ್ಚೆಗೆ ವೇದಿಕೆ ಒದಗಿಸಿದೆ.
ಮಂಗಳೂರು ನಗರ ಕೇಸರಿ ಪತಾಕೆಯಿಂದ ಕಂಗೊಳಿಸುತ್ತಿದ್ದು, ನಗರದ ಆಯಕಟ್ಟಿನ ಜಾಗದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ನಾಳೆ ಬೆಳಿಗ್ಗೆ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ಕಾರ್ಯಕಾರಿಣಿ ನಡೆಯಲಿದ್ದು, ಸ್ಫೋಟಕ ಪತ್ತೆ ದಳ, ಶ್ವಾನ ದಳ ಕಾರ್ಯಕ್ರಮದ ವೇದಿಕೆ ಸಹಿತ ಇಡೀ ಸಭಾಂಗಣದ ಆವರಣ ಪರಿಶೀಲಿಸಿದೆ.
Kshetra Samachara
04/11/2020 04:14 pm