ಮೂಡುಬಿದಿರೆ : ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುವುದರಿಂದ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವಿಲ್ಲ. ಆತ್ಮಾಭಿಮಾನದಿಂದ ನಿರ್ಮೂಲನೆಗೊಳಿಸಬಹುದು ಎಂದು ಲೋಕಾಯುಕ್ತ ಅಧಿಕಾರಿ ಭಾರತಿ ಹೇಳಿದರು.
ಲೋಕಾಯುಕ್ತ, ತಾಲೂಕು ಆಡಳಿತ ಮತ್ತು ಪುರಸಭೆಯ ವತಿಯಿಂದ ಪುರಸಭಾ ಕಚೇರಿಯಲ್ಲಿ ನಡೆದ ಭ್ರಷ್ಟಾಚಾರ ನಿರ್ಮೂಲನೆ ಜಾಗೃತಿ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನುದ್ದೇಶಿಸಿ ಅವರು ಮಾತನಾಡಿದರು.
ಹಣ ಪಡೆಯುವುದೊಂದೇ ಭ್ರಷ್ಟಾಚಾರವಲ್ಲ. ಕಾಲ ವಿಳಂಬ ಮಾಡುವುದು, ಅಧಿಕಾರ ವ್ಯಾಪ್ತಿ ಮೀರಿ ಕಾರ್ಯನಿರ್ವಹಿಸುವುದೂ ಭ್ರಷ್ಟಾಚಾರದ ಭಾಗವೇ ಆಗಿದೆ.
ಅಧಿಕಾರಿಗಳು ಕಾನೂನುಬದ್ಧವಾಗಿ ಕೆಲಸ ಮಾಡಬೇಕು. ಕಚೇರಿಯ ನಿಯಮಗಳ ಬಗ್ಗೆ ಪರಿಣಿತಿ ಹೊಂದಿರಬೇಕು. ಸಮಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಲೋಕಾಯುಕ್ತಕ್ಕೆ ದೂರು ನೀಡಿದ ಕಾರಣವೊಡ್ಡಿ ಅವರ ಕೆಲಸವನ್ನು ತಡೆಹಿಡಿಯುವುದು, ಅವರಲ್ಲಿ ಭಯ ಹುಟ್ಟಿಸುವುದು ಸಲ್ಲದು.
ದೂರು ಬಂದ ಮಾತ್ರಕ್ಕೆ ಅಧಿಕಾರಿಗಳ ವಿರುದ್ಧ ಇಲಾಖೆ ಕ್ರಮ ಕೈಗೊಳ್ಳುವುದಿಲ್ಲ. ಅದರ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ತಪ್ಪು ಕಂಡು ಬಂದಲ್ಲಿ ಮಾತ್ರ ಕ್ರಮಕೈಗೊಳ್ಳುತ್ತೇವೆ.
ಹಾಗಾಗಿ ಯಾವ ಅಧಿಕಾರಿಗಳೂ ಈ ವಿಷಯದಲ್ಲಿ ಭಯಪಡಬೇಕಾಗಿಲ್ಲ ಎಂದರು. ಪುರಸಭೆ ಮುಖ್ಯಾಧಿಕಾರಿ ಇಂದು ಎಂ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಇಲಾಖೆಯ ಅಧಿಕಾರಿಗಳು ಭ್ರಷ್ಟಾಚಾರದ ವಿರುದ್ಧ ಪ್ರತಿಜ್ಣೆ ಸ್ವೀಕರಿಸಿದರು.
Kshetra Samachara
03/11/2020 11:25 pm