ಮುಲ್ಕಿ: ರಾ.ಹೆ. 66ರ ಪಡುಪಣಂಬೂರು ಕಿರುಸೇತುವೆ ಬಳಿ ತೋಡಿನಲ್ಲಿ ಹೂಳು ತುಂಬಿದ್ದರಿಂದ ಎಕರೆಗಟ್ಟಲೆ ಕೃಷಿ ನಾಶವಾಗಿದ್ದು ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಸ್ಥಳೀಯ ವಿನಯ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವಿಜಯ ಶೆಟ್ಟಿ, ವಕೀಲ ಚಂದ್ರಶೇಖರ್ ಮತ್ತು ಸ್ಥಳೀಯ ಕೃಷಿಕರ ಮನವಿ ಹಿನ್ನೆಲೆಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ರಾಜೇಂದ್ರ, ಶಾಸಕ ಉಮಾನಾಥ ಕೋಟ್ಯಾನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭ ವಕೀಲ ಚಂದ್ರಶೇಖರ್ ಮಾತನಾಡಿ, ಹಲವು ವರ್ಷಗಳಿಂದ ಪಡುಪಣಂಬೂರು ಕಿರು ಸೇತುವೆ ಬಳಿ ತೋಡಿನಲ್ಲಿ ಹೂಳು ತುಂಬಿದ್ದರಿಂದ ಕೃತಕ ನೆರೆಯುಂಟಾಗಿ ತೋಡಿನ ಇಕ್ಕೆಲ ಇರುವ ಪಡುಪಣಂಬೂರು, ಚಿತ್ರಾಪು, ಕೊಲ್ನಾಡು ಪರಿಸರದ ಕೃಷಿಕರಿಗೆ 70ರಿಂದ 80 ಎಕರೆ ಕೃಷಿ ಹಾನಿ ಸಂಭವಿಸಿದೆ. ಈ ಬಗ್ಗೆ ಹಲವು ಬಾರಿ ಪಂಚಾಯಿತಿಗೆ ಮನವಿ ಮಾಡಿದ್ದು, ಹಣಕಾಸಿನ ಕೊರತೆಯಿಂದ ಕಾಮಗಾರಿ ನಡೆದಿಲ್ಲ. ತೋಡಿನಲ್ಲಿ ಕೆಲವರು ಪ್ಲಾಸ್ಟಿಕ್ ತ್ಯಾಜ್ಯ ಬಿಸಾಡುತ್ತಿದ್ದು, ಹೂಳು ತುಂಬಲು ಕಾರಣವಾಗಿದೆ ಎಂದರು. ಸ್ಥಳ ಪರಿಶೀಲಿಸಿದ ಬಳಿಕ ಕೃಷಿಕರ ಮನವಿಗೆ ಸ್ಪಂದಿಸಿದ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಕೂಡಲೇ ತ್ಯಾಜ್ಯ ತೆರವುಗೊಳಿಸಲು ಹಾಗೂ ತೋಡಿನ ಹೂಳು ತೆರವುಗೊಳಿಸಿ ಇಕ್ಕೆಲ ಸ್ವಚ್ಛ ಪಡಿಸುವುದಾಗಿ ಭರವಸೆ ನೀಡಿದ್ದಾರೆ.
Kshetra Samachara
03/11/2020 10:51 pm