ಮಂಗಳೂರು: ಹಿಂದಿ ಚಲನಚಿತ್ರ 'ಲಕ್ಷ್ಮಿ ಬಾಂಬ್' ನಿಷೇಧಿಸುವಂತೆ ಮಂಗಳೂರಲ್ಲಿ ಹಿಂದೂ ಮಹಾಸಭಾ ಕರ್ನಾಟಕ ಘಟಕ ಒತ್ತಾಯಿಸಿದೆ.
ಈ ಸಿನಿಮಾ ಬಹುಸಂಖ್ಯಾತ ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತದೆ ಮತ್ತು ಲವ್ ಜಿಹಾದ್‌ನ್ನು ಪ್ರಚೋದಿಸುತ್ತದೆ ಎಂದು ಆರೋಪಿಸಿದೆ.
ಮಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಖಿಲ ಭಾರತ ಹಿಂದೂ ಮಹಾಸಭಾ ಪ್ರಾದೇಶಿಕ ಕಾರ್ಯದರ್ಶಿ ಧರ್ಮೇಂದ್ರ ಅವರು, ಅಕ್ಷಯ್ ಕುಮಾರ್ ಅಭಿನಯದ 'ಲಕ್ಷ್ಮಿ ಬಾಂಬ್' ಚಲನಚಿತ್ರ ನವೆಂಬರ್ 9 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.
ಈ ಚಿತ್ರಕ್ಕೆ ಉದ್ದೇಶಪೂರ್ವಕವಾಗಿ ಲಕ್ಷ್ಮಿ ದೇವಿಯ ಹೆಸರನ್ನು ಇಟ್ಟು ದೀಪಾವಳಿ ಹಬ್ಬದ ಸಂದರ್ಭ ಚಿತ್ರ ಬಿಡುಗಡೆ ಮಾಡುವ ಸಂಚು ಹೂಡಲಾಗಿದೆ. ಅತ್ಯಂತ ಪೂಜ್ಯ ಹಿಂದೂ ದೇವತೆಯಾದ ಲಕ್ಷ್ಮಿ ಹೆಸರನ್ನು ಇಟ್ಟಿರುವುದು ಹಿಂದೂಗಳ ಭಾವನೆಗೆ ಘಾಸಿ ಉಂಟು ಮಾಡಿದೆ'' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಮುಖ್ಯ ಪಾತ್ರದಲ್ಲಿರುವ ನಟಿಯ ಹೆಸರು ಪ್ರಿಯಾ ಯಾದವ್ ಮತ್ತು ನಾಯಕ ಆಸಿಫ್. ಮುಸ್ಲಿಂ ಯುವಕ ಮತ್ತು ಹಿಂದೂ ಹುಡುಗಿಯ ನಡುವಿನ ಪ್ರೇಮ ಸಂಬಂಧ ತೋರಿಸುವ ಮೂಲಕ ಅದು 'ಲವ್ ಜಿಹಾದ್' ಅನ್ನು ಉದ್ದೇಶಪೂರ್ವಕವಾಗಿ ಬೆಂಬಲಿಸುತ್ತದೆ.
ಈ ಕಾರಣದಿಂದಾಗಿ ಈ ಚಲನಚಿತ್ರಕ್ಕೆ ನಿಷೇಧ ಹೇರಬೇಕು" ಎಂದು ಹಿಂದೂ ಮಹಾಸಭಾ ಒತ್ತಾಯಿಸಿದೆ. ಈ ಚಿತ್ರದಲ್ಲಿ ನಟ ಅಕ್ಷಯ್ ಕುಮಾರ್ ತೃತೀಯ ಲಿಂಗಿಯಂತೆ ವರ್ತಿಸಿರುವುದು ಟ್ರೈಲರ್‌ನಲ್ಲಿ ಕಂಡು ಬಂದಿದೆ. ಅವರು ಕೆಂಪು ಸೀರೆ, ಉದ್ದ ಕೂದಲು, ಹಣೆಯ ಮೇಲೆ ದೊಡ್ಡ ಕೆಂಪು ಬಿಂದಿ ಅಕ್ಷಯ್ ಹಾಕಿದ್ದು ಕೈಯಲ್ಲಿ ತ್ರಿಶೂಲ ಹಿಡಿದು ನೃತ್ಯ ಮಾಡಿರುವುದು ಕಾಣಬಹುದಾಗಿದೆ.
ಇದು ಹಿಂದೂ ದೇವತೆಯನ್ನು ಹಾಸ್ಯ ಮಾಡಿದಂತಿದೆ. ಅಷ್ಟೇ ಅಲ್ಲದೆ, ತೃತೀಯ ಲಿಂಗಿಗಳನ್ನೂ ಅವಮಾನಿಸುವಂತಿದೆ. ಈ ಚಿತ್ರದ ನಿರ್ಮಾಪಕರು ಶಬಿನಾ ಖಾನ್ ಹಾಗೂ ಚಿತ್ರ ಕಥೆಗಾರ ಫರ್ಹಾನ್ ಅವರು ಚಲನಚಿತ್ರದಲ್ಲಿ ಕೋಮು ದ್ವೇಷ ಉದ್ದೇಶಪೂರ್ವಕವಾಗಿ ಪ್ರಚೋದಿಸಿದ್ದಾರೆ'' ಎಂದು ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಧನರಾಜ್ ಪೂಜಾರಿ, ಮಂಗಳೂರು ದಕ್ಷಿಣ ಕ್ಷೇತ್ರ ಅಧ್ಯಕ್ಷ ಅಕ್ಷತ್ ಶೆಟ್ಟಿ, ವಸಂತ್ ಅಮೀನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಜೀರ್ ಶೆಟ್ಟಿ ಉಪಸ್ಥಿತರಿದ್ದರು.
Kshetra Samachara
27/10/2020 06:44 pm