ಮಂಗಳೂರು: ಜಿಲ್ಲೆಯ ಗಂಜಿಮಠ ಸಮೀಪದ ಬಡಗ ಎಡಪದವು ಗ್ರಾಮದಲ್ಲಿ ಕಲ್ಲು ಕೋರೆಗೆ ಪರ್ಮಿಟ್ ಪಡೆದಿದ್ದ ಶಾಸಕರೊಬ್ಬರ ಸಂಬಂಧಿ, ಅದೇ ಪರ್ಮಿಟ್ ತೋರಿಸಿ ಮುಡಿಪು ಬಳಿ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂಬ ಆರೋಪಕ್ಕೆ ಮಂಗಳೂರಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಪ್ರತಿಕ್ರಿಯೆ ನೀಡಿದ್ದಾರೆ. ಮಂಗಳೂರಿನ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಬಿ.ರಮಾನಾಥ ರೈ ಯವರು ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು. ಮುಡಿಪು ಭಾಗದಲ್ಲಿ ನನಗೆ ಸಂಬಂಧಿಕರು ಯಾರೂ ಇಲ್ಲ.
ನಾನು ಅನುಮತಿ ಪಡೆದು ಕಲ್ಲಿನ ಕ್ವಾರೆ ಮಾಡುತ್ತಿದ್ದೇನೆ. ಕೊರೊನಾದಿಂದಾಗಿ ಕಳೆದ ಆರು ತಿಂಗಳಿನಿಂದ ವ್ಯಾಪಾರ ಮಾಡುತ್ತಿಲ್ಲ. ಈವರೆಗೂ ನಾನು ಕಾನೂನಿನಡಿಯಲ್ಲಿಯೇ ವ್ಯವಹಾರ ಮಾಡುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದರು. ಇನ್ನು ದಕ್ಷಿಣ ಕನ್ನಡ
ಜಿಲ್ಲೆಯ ಬೇರೆ ಕಡೆಯಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದೆ. ಅದರ ಕುರಿತು ಬೇಗನೇ ತನಿಖೆ ನಡೆಯಲಿ. ಯಾವುದೇ ದಾಖಲೆ ಬೇಕಾದರೂ ಗಣಿ ಇಲಾಖೆ ಮೂಲಕ ಸಿಗುತ್ತದೆ ಎಂದ ಅವರು ನನಗೆ ರಾಜಕೀಯ ಮುಖ್ಯವಲ್ಲ, ಕೃಷಿ ಮಾಡಿ ಬದುಕಬಲ್ಲೆ. ಆದರೆ, ಅಡ್ಡಗೋಡೆ ಮೇಲೆ ದೀಪ ಇಟ್ಟು ತೇಜೋವಧೆ ಮಾಡಬಾರದು. ಉನ್ನತ ಮಟ್ಟದ ತನಿಖೆ ಮಾಡಬೇಕೆಂದು ಒತ್ತಾಯಿಸುವವರಲ್ಲಿ ನಾನು ಕೂಡಾ ಒಬ್ಬ ಎಂದು ಎದಿರೇಟು ನೀಡಿದರು.
Kshetra Samachara
20/10/2020 09:46 am