ಎಣ್ಣೆಹೊಳೆ : ಅಭಿವೃದ್ಧಿ, ಯೋಜನೆಗಳ ಅನುಷ್ಠಾನದ ಹೆಸರಿನಲ್ಲಿ ಶಾಸಕ ಸುನೀಲ್ ಕುಮಾರ್ ಮತ್ತು ಬಿಜೆಪಿ ಪಕ್ಷದ ಜನಪ್ರತಿನಿಧಇಗಳು ಕಮೀಷನ್ ದಂಧೆಯಲ್ಲಿ ನಿರಂತರವಾಗಿ ತೊಡಗಿದ್ದಾರೆ. ಅವರಿಗೆ ಜನರ ಸಂಕಷ್ಟ ಗೊತ್ತಿಲ್ಲ. ಹಣ ಮಾಡುವುದೇ ಒಂದು ಉದ್ದೇಶ. ಕೊರೊನಾದ ಆಹಾರದ ಕಿಟ್ ವಿತರಣೆಯಲ್ಲೂ ಹಣ ದೋಚಿದ್ದಾರೆ, ಪ್ರತಿ ಕಾಮಗಾರಿಯಲ್ಲೂ ಹಣದ ಲೂಟಿ ನಡೆಯುತ್ತಿದೆ ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಗಂಭಿರ ಆರೋಪ ಮಾಡಿದರು.
ಅವರು ಎಣ್ಣೆಹೊಳೆಯಲ್ಲಿ ಶನಿವಾರ ಹೆಬ್ರಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಅಸಮರ್ಪಕವಾದ 107 ಕೋಟಿ ರೂಪಾಯಿ ವೆಚ್ಚದ ಎಣ್ಣೆಹೊಳೆ ಏತ ನೀರಾವರಿ ಯೋಜನೆಯಿಂದ ರೈತರ ಸಹಿತ ಜನತೆಗೆ ಯಾವೂದೇ ಪ್ರಯೋಜನವಿಲ್ಲ. ಮಳೆಗಾಲದಲ್ಲಿ ನೀರು ತುಂಬಿ ಪೇಟೆಯ ಮನೆಗಳ ಸಹಿತ ಹಲವು ಪ್ರದೇಶ ಮುಳುಗಡೆಯಾಗುತ್ತದೆ. ಬೇಸಗೆ ಕಾಲದಲ್ಲಿ ನೀರೆ ನಿಲ್ಲುವುದಿಲ್ಲ, ಯೋಜನೆಯನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಿ ಎಂದು ಒತ್ತಾಯಿಸಿದ ಮಂಜುನಾಥ ಪೂಜಾರಿ
ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ವೇಳೆಯಲ್ಲಿ ಮಾಜಿ ಶಾಸಕ ದಿ.ಎಚ್.ಗೋಪಾಲ ಭಂಡಾರಿಯವರ ಮನವಿಯ ಮೇರೆಗೆ ಎಣ್ಣೆಹೊಳೆ ಏತ ನೀರಾವರಿ ಯೋಜನೆ ಮಂಜೂರು ಮಾಡಿದ್ದಾರೆ. ಯೋಜನೆಗೆ ಯಾವೂದೇ ಪೂರ್ವ ತಯಾರಿ ಮಾಡದೇ ಯೋಜನೆಯನ್ನು ಸಿದ್ಧ ಪಡಿಸಲಾಗಿದೆ. ಈಗಿರುವ ಸ್ಥಳ ಯೋಜನೆಗೆ ಸೂಕ್ತ ಅಲ್ಲ, ಇತ್ತೀಚೆಗೆ ಭಾರಿ ಮಳೆಯಿಂದ ಎಣ್ಣೆಹೊಳೆಯು ಮುಳುಗಿದೆ. ಜನರಿಗೆ ತೊಂದರೆಯಾಗುವ ಯಾವೂದೇ ಯೋಜನೆಗಳ ಅನುಷ್ಠಾನ ಬೇಡ, ಇನ್ನೂ 40 ಕೋಟಿ ರೂಪಾಯಿಯ ಹೆಚ್ಚುವರಿ ಅನುದಾನ ಮಂಜೂರು ಮಾಡಲಾಗಿದೆ ಎಂದು ಮಂಜುನಾಥ ಪೂಜಾರಿ ಹೇಳಿದರು.
ಜನರು ಕೊರೊನಾ ಸಂಕಷ್ಟದಲ್ಲಿರುವಾಗ ರಾಜ್ಯ ಮತ್ತು ಕೇಂದ್ರ ಸರ್ಕಾರ ಬಡಜನರಿಗೆ ಯಾವೂದೇ ಸಹಾಯ ಮಾಡಿಲ್ಲ. ಕಿಂಚಿತ್ 5 ರೂಪಾಯಿಯ ಮಾಸ್ಕ್ ಕೂಡ ಜನತೆಗೆ ನೀಡಿಲ್ಲ. ಸರ್ಕಾರಗಳ ಐೋಜನೆಗಳು ಘೋಷಣೆಯಲ್ಲೇ ಉಳಿದಿವೆ ಎಂದ ಮಂಜುನಾಥ ಪೂಜಾರಿ ಸರ್ಕಾರದಲ್ಲಿ ಎಲ್ಲರೂ ಹಣ ಮಾಡುವಂತಲೇ ಗಮನ ನೀಡುತ್ತಿದ್ದಾರೆ. ಅವರಿಗೆ ಜನರ ಸಂಕಷ್ಟ ಅರ್ಥವಾಗಲ್ಲ ಎಂದರು. ಬಿಜೆಪಿಯವರಿಗೆ ಅಧಿಕಾರದ ಮದ ಏರಿದೆ, ಪೋಲಿಸರು ಶಾಸಕರು ಮತ್ತು ಬಿಜೆಪಿಯವರ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ. ಜಿಲ್ಲೆಯ ಹಿರಿಯ ಅಧಿಕಾರಿಗಳಿಂದ ಹಿಡಿದ ಗ್ರಾಮದ ತನಕ ಅಧಿಕಾರಿಗಳು ಬಿಜೆಪಿಯವರಂತೆ ವರ್ತಿಸುದ್ದಾರೆ.
ಅಭಿವೃದ್ಧಿ ಎಂದರೆ ಕೇವಲ ಮಾತಲ್ಲ.... ಬಂಗಲೆ ನಿರ್ಮಾಣ.......! - ಸುಭೋದ್ ರಾವ್.
ಕಾಂಗ್ರೆಸ್ ನಾಯಕ ಕಾರ್ಕಳದ ಸುಭೋದ್ ರಾವ್ ಮಾತನಾಡಿ ಕಾರ್ಕಳ ಕ್ಷೇತ್ರದಲ್ಲಿ ಅಭಿವೃದ್ಧಿ ಎಂದರೆ ಬರಿ ಮಾತಲ್ಲ... ಕೋಟ್ಯಾಂತರ ರೂಪಾಯಿಯಲ್ಲಿ ಕುಟುಂಬದ ಹೆಸರಿನಲ್ಲಿ ಭವ್ಯ ಬಂಗಲೆ ನಿರ್ಮಾಣ, ಕೊರೊನಾ ಕಾಲದಲ್ಲೂ ಬಡವರ ಹೆಸರಿನ ಆಹಾರದ ಕಿಟ್ ನಲ್ಲಿ ವಂಚನೆ, ಕಮೀಷನ್ ದಂಧೆ, ಅಕ್ರಮಗಳ ಮಹಾಪೂರ. ಜನರ ಬದುಕಿಗೆ ಮಾರಕವಾಗುವ ಯಾವೂದೇ ಯೋಜನೆಯನ್ನು ಅನುಷ್ಠಾನ ಮಾಡಲು ಕಾಂಗ್ರೆಸ್ ಬಿಡುವುದಿಲ್ಲ. ಜನತೆಯೊಂದಿಗೆ ಕಾಂಗ್ರೆಸ್ ಇದೆ ಎಂದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಕಾಂಗ್ರೆಸ್ ನಾಯಕ ಡಾ.ಸಂತೋಷ ಕುಮಾರ್ ಶೆಟ್ಟಿ, ರವಿಶಂಕರ್ ಶೇರಿಗಾರ್, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಕೃಷ್ಣಮೂರ್ತಿ, ಪಕ್ಷದ ವಿವಿಧ ಘಟಕಗಳ ಪ್ರಮುರಾದ ಪ್ರಕಾಶ ಪೂಜಾರಿ ಕೆರ್ವಾಸೆ, ಸುಜಾತ ಲಕ್ಷ್ಮಣ್ ಆಚಾರ್ಯ ವರಂಗ, ರಾಘವ ದೇವಾಡಿಗ, ರಾಮಕೃಷ್ಣ ಶೆಟ್ಟಿ ಅಜೆಕಾರು, ಗಫೂರ್ ಅಜೆಕಾರು, ಶಶಿಕಲಾ ಡಿ. ಪೂಜಾರಿ ಮುದ್ರಾಡಿ ಹೆಬ್ರಿಯ ಎಚ್.ಜನಾರ್ಧನ್, ಸೇರಿದಂತೆ ಪಕ್ಷದ ಪ್ರಮುಖರು, ನಾಯಕರು ಭಾಗವಹಿಸಿದ್ದರು. ಎಣ್ಣೆಹೊಳೆ ಪೇಟೆಯಲ್ಲಿ ಯೋಜನೆಯ ವಿರುದ್ಧ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
Kshetra Samachara
10/10/2020 08:44 pm