ಬಂಟ್ವಾಳ: ಮಂಗಳೂರು ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಾದ ಬಿ.ಸಿ.ರೋಡ್ ಅಡ್ಡಹೊಳೆ ಚತುಷ್ಪಥ ರಸ್ತೆ ಕಾಮಗಾರಿ ನಡೆಯುವ ಸಂದರ್ಭ ಉದ್ಭವವಾದ ನೀರಿನ ಹೊಂಡದಲ್ಲಿ ಮಾನಸಿಕ ಅಸ್ವಸ್ಥನಂತೆ ಕಾಣುವ ವ್ಯಕ್ತಿಯೊಬ್ಬ ಇಳಿದು ಈಜುವಂತೆ ನೀರಾಟವಾಡುವ ದೃಶ್ಯ ಕಂಡುಬಂದಿದೆ.
ಬಿ.ಸಿ.ರೋಡ್ ನಿಂದ ಮಾಣಿವರೆಗೆ ರಸ್ತೆ ಕಾಮಗಾರಿ ನಡೆಯುವ ವೇಳೆ ಅಲ್ಲಲ್ಲಿ ಹೊಂಡಗಳು, ದಿಢೀರನೆ ಇರುವ ಡೈವರ್ಶನ್ ಗಳ ಕಾರಣ ವಾಹನ ಸವಾರರು ಗೊಂದಲಕ್ಕೊಳಗಾಗುತ್ತಿದ್ದರೆ, ಇನ್ನೂ ಸುರಿಯುತ್ತಿರುವ ಮಳೆಯಿಂದ ಹೊಂಡದ ಆಳ ಗೊತ್ತಾಗದೆ ವಾಹನವೂ ಜಖಂಗೊಳ್ಳುತ್ತಿವೆ.
ಈ ಮಧ್ಯೆ ಕಲ್ಲಡ್ಕ ಪೇಟೆಯಲ್ಲಿ ವಾಹನದಟ್ಟಣೆ ವಿಪರೀತವಾಗುತ್ತಿದ್ದು, ಪೀಕ್ ಅವರ್ ನಲ್ಲಿ ಟ್ರಾಫಿಕ್ ಜಾಮ್ ತಲೆದೋರುತ್ತಿದೆ. ಕಲ್ಲಡ್ಕದಲ್ಲಿ ಬೃಹತ್ ಫ್ಲೈಓವರ್ ನಿರ್ಮಾಣಕ್ಕೆ ರಸ್ತೆ ಮಧ್ಯ ಕಾಮಗಾರಿ ನಡೆಯುತ್ತಿದ್ದು, ಇದಕ್ಕೆ ಅಗೆಯಲಾದ ಹೊಂಡ ಮತ್ತಷ್ಟು ಅಗಲವಾಗಿದ್ದು, ಅಪಾಯಕಾರಿಯಾಗಿದೆ. ಇದನ್ನು ಗುರುತು ಹಚ್ಚಲು ಪ್ಲಾಸ್ಟಿಕ್ ಟೇಪ್ ಅನ್ನು ಸುತ್ತಲೂ ಕಟ್ಟಲಾಗಿದ್ದು, ಯಾರೂ ಆ ಭಾಗದಲ್ಲಿ ಸಂಚರಿಸಬಾರದು ಎಂಬರ್ಥ ನೀಡುವ ಸೂಚನೆಯಿದೆ.
ಆದರೆ ಮಾನಸಿಕ ಅಸ್ವಸ್ಥನಂತಿದ್ದ ವ್ಯಕ್ತಿಯೊಬ್ಬ ಅದ್ಯಾವುದನ್ನೂ ಗಮನಿಸದೆ ನೇರವಾಗಿ ಹೊಂಡಕ್ಕಿಳಿದಿದ್ದಾನೆ. ಈಜಾಡಿದ್ದಾನೆ. ಅಲ್ಲೇ ಸ್ನಾನ ಮಾಡುವಂತೆ ನೀರಲ್ಲಿ ಹೊರಳಿದ್ದಾನೆ. ಬಟ್ಟೆಯನ್ನು ಮೇಲಕ್ಕೆತ್ತಿ ಕುಣಿಯುವ ಪೋಸ್ ಕೊಟ್ಟಿದ್ದಾನೆ. ಇದು ಕುತೂಹಲಿಗರ ಮೊಬೈಲ್ ಗಳಿಗೆ ಆಹಾರವಾಗಿದೆ. ಇದನ್ನು ಚಿತ್ರೀಕರಿಸಿ, ಇದು ಕಲ್ಲಡ್ಕ, ಗುತ್ತಿಗೆ ಕಾಮಗಾರಿ ಕಂಪನಿಯವರು ಮಾಡಿದ ಹೊಂಡ, ಇನ್ನೇನೇನು ಕಾದಿದೆಯೋ ಎಂಬ ಉದ್ಗಾರದೊಂದಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಹರಿಯಬಿಡಲಾಗಿದೆ.
ಇದೀಗ ವ್ಯಕ್ತಿಯೊಬ್ಬ ಸ್ನಾನ ಮಾಡುವ ದೃಶ್ಯದ ವಿಡಿಯೋ ಕಲ್ಲಡ್ಕದ ಸ್ಥಿತಿ ಹಾಗೂ ಸಮರ್ಪಕವಾಗಿ ಪರ್ಯಾಯ ವ್ಯವಸ್ಥೆ ಮತ್ತು ಸುರಕ್ಷತಾ ಕ್ರಮಗಳನ್ನು ಮಾಡದ ಗುತ್ತಿಗೆ ಕಂಪನಿಯ ವಿರುದ್ಧ ಆಕ್ರೋಶ ಹೊರಹೊಮ್ಮಲು ವೇದಿಕೆ ಒದಗಿಸಿಕೊಟ್ಟಂತಾಗಿದೆ.
Kshetra Samachara
18/09/2022 03:10 pm