ಕಾಪು: ಶ್ರೀ ಕೃಷ್ಣ ಜನ್ಮಾಷ್ಟಮಿ ದಿನ ತುಳುನಾಡಿನಲ್ಲಿ ಮೂಡೆ (ಕೊಟ್ಟೆ ) ಕಡುಬು ಮಾಡುವುದು ವಾಡಿಕೆ. ಯದುನಂದನನಿಗೆ ಪ್ರಿಯವಾದ ತಿಂಡಿಗಳಲ್ಲಿ ಮೂಡೆಯೂ ಒಂದಾಗಿದ್ದು, ಅಷ್ಟಮಿಯಂದು ಕರಾವಳಿಯ ಬಹುತೇಕರ ಮನೆಯಲ್ಲಿ ಮೂಡೆ ಘಮಘಮಿಸುತ್ತಿರುತ್ತದೆ.
ಕೇದಗೆ ವರ್ಗದ ಮುಂಡೇವು ಮುಂಡಕ ಎಲೆ, ಪೊದರುಗಳು ತುಳುನಾಡಿನಲ್ಲಿ ಮುಖ್ಯವಾಗಿ ತೋಡು ತೊರೆಗಳ ದಂಡೆಗಳಲ್ಲಿ ಕಂಡು ಬರುತ್ತವೆ. ಒಂದು ಮಾರುದ್ದದ ಇದರ ಎಲೆಗಳು ನಡು ಹಿಂಬದಿ ಮತ್ತು ಅಂಚಿನಲ್ಲಿ ಸಾಲು ಮುಳ್ಳುಗಳಿಂದ ತುಂಬಿರುತ್ತವೆ. ಮುಳ್ಳುಗಳ ಸಾಲನ್ನು ಕತ್ತಿಯಿಂದ ಸವರಿ ತೆಗೆಯಬೇಕು. ಬಿಸಿಲಿನಲ್ಲಿ ಒಣಗಿಸಿ, ಬೆಂಕಿಯಲ್ಲಿ ತುಸು ಬಾಡಿಸಿದರೆ ಎಲೆ ಸಿದ್ಧ.
ಉರುಟು ಕೊಟ್ಟೆ ಕಟ್ಟುವುದು ಒಂದು ಕಲೆ. ಕರ್ಕಟೆ ಮುಳ್ಳು, ತೆಂಗಿನ ಗರಿಯ ಕಡ್ಡಿ ಬಳಸಿ ಕೊಟ್ಟೆ ಕಟ್ಟುವರು. ಎಲೆಯನ್ನು ಬಿಸಿಗೆ ಬಾಡಿಸಿ ಬಡಿದು, ಮುಳ್ಳು ಇಲ್ಲವೇ ಕಡ್ಡಿ ಚುಚ್ಚಿ ಇದನ್ನು ತಯಾರಿಸುತ್ತಾರೆ. ಹಾಗಾಗಿ ಇದು ಕೊಟ್ಟೆ ಒಂದು ರೀತಿಯ ತೊಟ್ಟೆ ಎಂಬ ಅನ್ವರ್ಥ ನಾಮವನ್ನು ಪಡೆದಿದೆ.
ಖರೀದಿದಾರರು ಮೂಡೆ ಕೊಟ್ಟೆ ಬೆಲೆ ಹೆಚ್ಚಾಗಿದೆ ಎಂದು ವಾದ ಮಾಡಿ ಕೊಂಡುಕೊಳ್ಳುತ್ತಾರೆ. ಆದರೆ, ಕೊಟ್ಟೆ ತಯಾರಿಕೆಯ ಹಿಂದಿರುವ ಪರಿಶ್ರಮ ಯಾರಿಗೂ ತಿಳಿದಿಲ್ಲ. ಅಷ್ಟಮಿ ಹಿಂದಿನ ಮಾರುಕಟ್ಟೆಗೆ ಬಂದು ಮೂಡೆಯ ಕೊಟ್ಟೆ ತೆಗೆದುಕೊಂಡು ಹೋಗುತ್ತಾರೆ. ವರ್ಷದಿಂದ ವರ್ಷಕ್ಕೆ ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಹಾಗಾಗಿ ಅದರ ದರದಲ್ಲಿಯೂ ಏರಿಕೆಯಾಗಿದೆ.
PublicNext
18/08/2022 10:51 pm