ಉಡುಪಿ: ನಗರದ ಚಿತ್ತರಂಜನ್ ಸರ್ಕಲ್ ಬಳಿ ಕಳೆದ ಹದಿನಾರು ವರ್ಷಗಳಿಂದ ನೆಲೆಕಂಡಿದ್ದ ಹೆಣ್ಣು ನಾಯಿ, ವಯೋಸಹಜ ಕಾಯಿಲೆಯಿಂದ ಬಳಲುತ್ತಿತ್ತು. ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರು ಪಶುವೈದ್ಯ ಡಾ.ದಯಾನಂದ ಪೈ ಅವರ ಮೂಲಕ ಚಿಕಿತ್ಸೆಗೆ ಒಳಪಡಿಸಿದ್ದರು.
ಹಲವು ದಿನಗಳಿಂದ ಆರೈಕೆಯಲ್ಲಿದ್ದ ನಾಯಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ. ಜೂಲಿ ಎಂದು ಕರೆಯಲ್ಪಡುತ್ತಿದ್ದ ಈ ಬೀದಿ ನಾಯಿಗೆ, ಚಾರ್ಲಿ ಸಿನಿಮಾ ಬಂದ ಬಳಿಕ ಶ್ವಾನ ಪ್ರಿಯರು" ಚಾರ್ಲಿ "ಎಂದೇ ಕರೆಯುತ್ತಿದ್ದರು. ಪರಿಸರದ ಜನರ ಪ್ರೀತಿಗೆ ಒಳಪಟ್ಟ ಚಾರ್ಲಿ ಪರಿಸರದ ಅಂಗಡಿಗಳ ಕಾವಲುಗಾರನಾಗಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿತ್ತು.
ಚಾರ್ಲಿಯ ಸಾವಿಗೆ ಪರಿಸರದ ಜನರು ಬಹಳ ನೊಂದಕೊಂಡರು. ನಾಯಿ ತೋರಿದ ಪ್ರೀತಿಯ ದ್ಯೋತಕವಾಗಿ ,ನಾಗರಿಕ ಸಮಿತಿಯ ಕಾರ್ಯಕರ್ತರು ಅಗಲಿದ ಶ್ವಾನದ ಕಳೇಬರಕ್ಕೆ ಹೂ ಹಾರ ಸಮರ್ಪಿಸಿ ಅಂತಿಮ ಗೌರವದೊಂದಿಗೆ ಅಂತ್ಯಸಂಸ್ಕಾರ ನಡೆಸಿದ್ದಾರೆ. ನಿತ್ಯಾನಂದ ಒಳಕಾಡು, ಕೆ.ಬಾಲಗಂಗಾಧರ ರಾವ್, ಪಾಪುಲರ್ ಬಣ್ಣದ ಮಳಿಗೆಯ ಸಿಬ್ಬಂದಿ ಈ ಕಾರ್ಯದಲ್ಲಿ ಕೈಜೋಡಿಸಿದರು.
Kshetra Samachara
16/08/2022 05:36 pm