ವರದಿ: ವಿಶ್ವನಾಥ ಪಂಜಿಮೊಗರು
ಮಂಗಳೂರು: ಇತಿಹಾಸದ ಪುಟದಲ್ಲಿ ದೇಶದ ಸ್ವಾತಂತ್ರ್ಯ ಹೋರಾಟವು 1857ರ ಭಾರತ ಸ್ವಾತಂತ್ರ್ಯ ಸಂಗ್ರಾಮದಿಂದ ಆರಂಭವಾಗಿದೆ ಎಂದು ದಾಖಲಾಗಿದೆ. ಆದರೆ ಅದಕ್ಕಿಂತಲೂ ಬರೋಬ್ಬರಿ 20 ವರ್ಷಗಳ ಹಿಂದೆಯೇ ದ.ಕ.ಜಿಲ್ಲೆಯ ಅಂದರೆ ಅಂದಿನ ಕೆನರಾ ಜಿಲ್ಲೆಯ ರೈತವೀರರು ಬ್ರಿಟಿಷ್ ಸೈನ್ಯವನ್ನು ಹಿಮ್ಮೆಟ್ಟಿಸಿ ಕೆಲದಿನಗಳ ಕಾಲ ಆಡಳಿತದ ಚುಕ್ಕಾಣಿ ಹಿಡಿದಿರುವ ವಿಚಾರ ಮಾತ್ರ ಇತಿಹಾಸ ಪುಟದಲ್ಲೆಲ್ಲೂ ದಾಖಲಾಗಿಲ್ಲ. ಸ್ವಾತಂತ್ರ್ಯದ ಅಮೃತಮಹೋತ್ಸವನ್ನು ಆಚರಣೆಯ ಸಮಯದಲ್ಲಿ ಈ ರೈತ ವೀರರ ಹೋರಾಟದ ಸುತ್ತ ಪಬ್ಲಿಕ್ ನೆಕ್ಸ್ಟ್ ಬೆಳಕು ಚೆಲ್ಲಿದೆ.
ಹೌದು... ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕದಿದ್ದಾಗ, ಅತಿಯಾದ ತೆರಿಗೆಯ ವಿರುದ್ಧ ಕೆನರಾ ಜಿಲ್ಲೆಯ ರೈತರು ಬ್ರಿಟಿಷರ ವಿರುದ್ಧ ಆಗಾಗ ಬಂಡಾಯವೇಳುತ್ತಿದ್ದರು. 1837ರ ಮಾರ್ಚ್ 30ರಂದು ಕೆದಂಬಾಡಿ ರಾಮಯ್ಯ ಗೌಡರ ಮುಂದಾಳತ್ವದಲ್ಲಿ ಭಾರೀ ದೊಡ್ಡ ರೈತ ದಂಡೊಂದು ಸುಳ್ಯದಿಂದ ಹೊರಟು, ಬೆಳ್ಳಾರೆಯಲ್ಲಿ ಬ್ರಿಟಿಷ್ ಕಂಪೆನಿಯ ಖಜಾನೆಯನ್ನು ವಶಪಡಿಸಿ, ಪುತ್ತೂರನ್ನು ಕೈವಶ ಮಾಡಿ ಮಂಗಳೂರಿಗೆ ಆಗಮಿಸಿತು. ಬೃಹತ್ ರೈತರ ದಂಡು ಮಂಗಳೂರಿಗೆ ಆಗಮಿಸುತ್ತಿದ್ದಂತೆ ಬ್ರಿಟಿಷ್ ಅಧಿಕಾರಿಗಳು ಮುಂಬೈ, ಕಣ್ಣನ್ನೂರಿಗೆ ಪಲಾಯನಗೈದರು.
ರೈತರ ದಂಡು ಬ್ರಿಟಿಷ್ ಬಂಗಲೆಗಳಿಗೆ ಬೆಂಕಿ ಹಚ್ಚಿ, ಈಸ್ಟ್ ಇಂಡಿಯಾ ಕಂಪೆನಿಯ ಬಾವುಟ ಕಿತ್ತೆಸೆದು ತಮ್ಮ ಬಾವುಟವನ್ನು ಹಾರಿಸಿ ಮಂಗಳೂರನ್ನು ಸ್ವತಂತ್ರಗೊಳಿಸುತ್ತಾರೆ. ಮುಂದೆ 13ದಿನಗಳ ಕಾಲ ರೈತರು ಸ್ವತಂತ್ರವಾಗಿ ರಾಜ್ಯಭಾರ ಮಾಡುತ್ತಾರೆ. ಆ ಬಳಿಕ ಬ್ರಿಟಿಷ್ ಸುಸಜ್ಜಿತ ಸೈನ್ಯವು ರೈತ ದಂಡನ್ನು ಸದೆ ಬಡಿದು ಹಲವು ರೈತ ಮುಖಂಡರನ್ನು ವಧಾ ಸ್ಥಳವೊಂದರಲ್ಲಿ ನೇಣು ಹಾಕುತ್ತದೆ. ಆ ಮೃತದೇಹಗಳನ್ನು ಅಲ್ಲಿಯೇ ನೇತು ಹಾಕಿ ಹದ್ದು, ಗಿಡುಗಗಳಿಗೆ ಆಹಾರವಾಗುವಂತೆ ಮಾಡುತ್ತಾರೆ. ಅದೇ ಸ್ಥಳವನ್ನು ಜನರು ಭೀತಿಯಿಂದ ಭೀಕರ ಕಟ್ಟೆಯೆಂದು ಗುರುತಿಸಿ ಇಂದು ಅದು ಬಿಕರ್ನಕಟ್ಟೆ ಎಂದೆನಿಸಿದೆ.
ಕೆನರಾ ಜಿಲ್ಲೆಯ ರೈತವೀರರ ಈ ಧೀರೋತ್ತ ಸಾಹಸ ಮಾತ್ರ ಸ್ವಾತಂತ್ರ್ಯ ಇತಿಹಾಸದ ಪುಟಗಳಲ್ಲಿ ದಾಖಲಾಗಲೇ ಇಲ್ಲ. ಅಲ್ಲದೆ ಬ್ರಿಟಿಷರ ವ್ಯವಸ್ಥಿತ ಸಂಚಿನಿಂದ ಈ ಸ್ವಾತಂತ್ರ್ಯ ಹೋರಾಟ ಸರಿಯಾಗಿ ದಾಖಲಾಗದೆ ಮುಚ್ಚಿಹೋಯಿತು. ಈ ಹೋರಾಟದ ಕುರುಹುಗಳು ಈಗಲೂ ಎಲ್ಲೂ ಕಾಣ ಸಿಗದಿರುವುದು ವಿಪರ್ಯಾಸವೇ ಸರಿ. ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯ ಸಂಶೋಧಕರು, ಬರಹಗಾರರು ಈ ರೈತ ಸಾಹಸದ ಬಗ್ಗೆ ಸಂಶೋಧನಾತ್ಮಕ ಗ್ರಂಥಗಳನ್ನು ರಚಿಸಿದ್ದಾರೆ. ಆದರೆ 1837ರ ಈ ಮಂಗಳೂರು ಕ್ರಾಂತಿಯ ಬಗ್ಗೆ ಪಠ್ಯವಾಗಿಯೂ ವಿದ್ಯಾರ್ಥಿಗಳು ಓದಬೇಕಾದ ತುರ್ತು ಅನಿವಾರ್ಯತೆ ಈ ಕಾಲಕ್ಕಿದೆ.
Kshetra Samachara
10/08/2022 10:55 am