ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯದ ಹಿರಿಯ ಸಾಹಿತಿ ವಿದ್ವಾನ್ ಟಿ.ಜಿ.ಮುಡೂರು ಇನ್ನಿಲ್ಲ

ಸುಳ್ಯ: ಹಿರಿಯ ಸಾಹಿತಿ, ವಿದ್ವಾನ್ ಟಿ.ಜಿ.ಮುಡೂರು ಇನ್ನಿಲ್ಲ. ಇಂದು ಸಂಜೆ ಪುತ್ತೂರಿನ ಆಸ್ಪತ್ರೆಯಲ್ಲಿ‌ ಅವರು ನಿಧನರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು. ಪತ್ನಿ, ಮೂವರು ಪುತ್ರಿಯರು ಹಾಗು ಓರ್ವ ಪುತ್ರ ಹಾಗು ಬಂಧು ಮಿತ್ರರನ್ನು ಅಗಲಿದ್ದಾರೆ.

ಅಧ್ಯಾಪಕ , ಕೃಷಿಕ , ಕವಿ , ವಿದ್ವಾಂಸರಾಗಿ ಹೆಸರು ಮಾಡಿದ್ದ ತಮ್ಮಯ್ಯ ಗೌಡ ಮುಡೂರವರು ಕನ್ನಡ,ತುಳು , ಅರೆಭಾಷೆ ಈ ಮೂರು ಭಾಷೆಗಳಲ್ಲಿ ಕೈಯಾಡಿಸಿದವರು ಅಲ್ಲದೇ ‘ ಹೃದಯರೂಪಕ ‘ ಎಂಬ ಆಂಗ್ಲ ನಾಟಕದ ರೂಪಾಂತರ ಕೃತಿಯನ್ನೂ ಪ್ರಕಟಿಸಿದ್ದಾರೆ.

ಟಿ.ಜಿ ಮುಡೂರುರವರು 24.11.1927 ರಂದು ಸುಬ್ಬಪ್ಪ ಗೌಡ ಹಾಗೂ ಬಾಲಕ್ಕ ದಂಪತಿಗಳ ಪುತ್ರನಾಗಿ ಕಳಂಜ ಗ್ರಾಮದ ವಾರಣಾಸಿಯಲ್ಲಿ ಜನಿಸಿದರು.1948 ರಿಂದ ಪ್ರಾಥಮಿಕ , ಪ್ರೌಢಶಾಲೆಗಳಲ್ಲಿ ದುಡಿದು ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ 1982 ರಲ್ಲಿ ನಿವೃತ್ತರಾದರು.ಮದರಾಸು ವಿಶ್ವವಿದ್ಯಾನಿಲಯದಿಂದ ಕನ್ನಡ ವಿದ್ವಾನ್ ಹಾಗೂ ಮೈಸೂರು ಎಂ.ಎ ಹಾಗೂ ಬಿ.ಎಡ್ ಗಳಿಸಿದ ಇವರು 1964 ರಿಂದಲೇ ಸಾಹಿತ್ಯ ಕ್ಷೇತ್ರದಲ್ಲಿ ದುಡಿದರು.

ತಮ್ಮ ಅಪಾರವಾದ ಪಾಂಡಿತ್ಯದಿಂದ ಇವರು ರಚಿಸಿದ ಕೃತಿಗಳು ಹಲವಾರು . ಕಾಡಮಲ್ಲಿಗೆ ,ಹೊಸತು ಕಟ್ಟು , ಕುಡಿಮಿಂಚು , ಪ್ರಗತಿಯಕರೆ , ಬಾನಂಚೆ ಇವರ ಕವನ ಸಂಕಲನಗಳು. ಅಬ್ಬಿಯ ಮಡಿಲು, ಕಣ್ ಕನಸು ತೆರೆದಾಗ – ಇವರ ಕಾದಂಬರಿಗಳು ಮತ್ತು ಕಥಾ ಸಂಕಲನಗಳು. ಗೀಟುಗೆರೆ ‘ ಅಂಕಣದಿಂದ ಇವರು ತುಂಬಾ ಜನಪ್ರಿಯರಾದರು.

ಬೆಳ್ಳಿಬೆಳಕು ‘ಇವರ ಮುಕ್ತಕಗಳು ‘ ಜೀವನದಯಾಷ್ಟಮಿ ‘ ಇವರು ರಚಿಸಿದ ಗದ್ಯಾನುದವಾದರೆ , ಧಾರಾ ಪಯಸ್ವಿನಿ ಇವರ ಪ್ರಬಂಧ ಲೇಖನಗಳು , ನಂದಾದೀಪ , ಶ್ರೀಮತಿ , ಶಿವಕುಮಾರಿ , ಕೇರಳ ಕುಮಾರಿ , ಸಖು , ಅಚ್ಚರಿಯ ಅರಳೆಲೆ ,ಮಧ್ಯಮಾ ಇವರು ರಚಿಸಿದ ನಾಟಕಗಳು. ಇನ್ಸೂರಳಿಯ ‘ ಮತ್ತು ‘ ಮರಳಿ ಮನೆಗೆ ‘ – ಇವರ ಪ್ರಹಸನಗಳು. ಹುತ್ತದಲ್ಲಿ ಹೂ , ದಯೆಯ ದಾಂಗುಡಿ , ಅಮರ ಕಲ್ಯಾಣ ಕ್ರಾಂತಿ – ಇವರು ರಚಿಸಿದ ಬಾನುಲಿ ರೂಪಕಗಳು. ಮಕುಟೋರು ಭಂಗ ಮತ್ತು ಸಾವೋಲಿದ ಸಾವಿತ್ರಿ- ಇವರ ಛಂದೊ ನಾಟಕಗಳು. ಹೊಸಕೆರೆಯ ಹೊನ್ನಮ್ಮ ಇವರ ಜಾನಪದ ಗೀತಾರೂಪಕ ಹಾಗು ಗುರುವನಗುಡಿ , ಸೊನ್ನೆಯಿಂದ ಸೊನ್ನೆಗೆ- ಗೀತಾ ರೂಪಕಗಳು, ಹೃದಯ ರೂಪಕ- ಇವರ ಆಂಗ್ಲ ನಾಟಕದ ರೂಪಾಂತರ. ಸಿಡಿಲ ಮರಿ ಅಶ್ವತ್ಥಾಮನ್ ಮತ್ತು ಮೋಹನ ಮುರಲಿ ಇವರ ಖಂಡಕಾವ್ಯಗಳು.

ಪ್ರಥಮ ಸ್ವಾತಂತ್ರ್ಯ ಸಮರ- ಎಂಬ ಯಕ್ಷಗಾನ ಪ್ರಸಂಗವನ್ನು ಇವರು ರಚಿಸಿದ್ದಾರೆ. ಒಪ್ಪಕುಂಞಿ – ಇವರ ಹವಿಗನ್ನಡ ಪ್ರಹಸನವಾದರೆ , ಬೊಳ್ಳಾಕನ ಮುಗ್ತ್ -ಇವರ ಅರೆಭಾಷೆ ಕೃತಿ. ತುಳು ಭಾಷೆಯಲ್ಲಿ ಇವರು ಜಾಗೀರ್‌ದಾರ್‌ ಜಗ್ಗೆ , ಗ್ರಾಜುವೇಟ್ ಗಿರಿಜ , ಸೀನನಸಿನಿಮೊ , ಗಟ್ಯಾಂಡ ರೊಟ್ಟಿ , ತೆಲುಪಾಂಡ ಪಲ್ಲವು , ದೂರದ ಕುಕ್ಕು ಮುಟ್ಟದ ಅಂಬಟೆ , ಕೆಡ್ಡಾಸೊ , ಬಲಿಪರ್ಬ , ಜೋಕುಳೆ ಬುದ್ಧಿ ಎಂಬ 10 ನಾಟಕ ಪ್ರಹಸನಗಳನ್ನು , ಸುಗ್ಗಿ ಪುಣ್ಣಮೆ , ಎಂಬ ತುಳು ಜಾನಪದ ಹಾಡುಗಳ ಸಂಕಲನವನ್ನೂ ,’ ಕೋಟಿ- ಚೆನ್ನಯ್ಯ ‘ ಎಂಬ ತುಳು ಯಕ್ಷಗಾನ ರೂಪಕವನ್ನೂ ರಚಿಸಿರುತ್ತಾರೆ.

ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದಲ್ಲಿ ಸುಳ್ಯ ತಾಲೂಕಿನ ಪ್ರತಿನಿಧಿಯಾಗಿ 15 ವರ್ಷಗಳ ಕಾಲ, ಸುಳ್ಯ ಘಟಕವಾದಾಗ ತಾಲೂಕ ಕ.ಸಾ.ಪ. ಅಧ್ಯಕ್ಷರಾಗಿ 3 ವರ್ಷ ಕಾರ್ಯ ನಿರ್ವಹಿಸಿರುತ್ತಾರೆ. ಸುಬ್ರಹ್ಮಣ್ಯ , ಪಂಜ , ಅಡ್ಕಾರುಗಳಲ್ಲಿ ತಾಲೂಕು ಸಾಹಿತ್ಯ ಸಮ್ಮೇಳನಗಳು ಇವರ ನೇತೃತ್ವದಲ್ಲಿ ಸಂಘಟಿಸಲ್ಪಟ್ಟಿದೆ . ಸುಳ್ಯದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನವೂ ಇವರ ನೇತೃತ್ವದಲ್ಲಿ ನಡೆದಿದೆ.1997 ರಲ್ಲಿ ಅರಂತೋಡುನಲ್ಲಿ ಜರಗಿದ ಸುಳ್ಯ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು.

ತಾಲೂಕು ರಾಜ್ಯೋತ್ಸವ ಪ್ರಶಸ್ತಿ , ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ , ಸುವರ್ಣ ಕರ್ನಾಟಕ ಸಂಸ್ಕೃತಿ ದಿಬ್ಬಣದಲ್ಲಿ ಸುಳ್ಯದಲ್ಲಿ ಇವರನ್ನು ಸನ್ಮಾನಿಸುವುದರ ಜೊತೆಗೆ ‘ ಟಿ.ಜಿ.ಮುಡೂರು ಬದುಕು ಬರಹಗಳ ಅಭಿನಂದನಾ ಗ್ರಂಥ- ನಂದಾದೀಪವನ್ನು ಅರ್ಪಿಸಿ ಅದ್ದೂರಿಯಾಗಿ ಪಂಜದಲ್ಲಿ ಸನ್ಮಾನಿಸಿರುವುದು ಇವರ ಜನಪ್ರಿಯತೆಗೆ ಸಾಕ್ಷಿ. ಬಾಪೂಜಿ ಸೇವಾಶ್ರಮ ಪಂಜ , ಸಾರ್ವಜನಿಕ ಆರಾಧನಾ ಸಮಿತಿ ಪಂಜ , ಪಂಜ ಜೇಸಿಸ್ , ಅಪ್ನಾದೇಶ್ ಪಂಜ ಘಟಕ, ಸಂಗಮ ಕಲಾ ಸಂಘ ಕಲ್ಮಡ್ಕ , ಗೀತಾ ಪ್ರಕಾಶನ ಅಜ್ಜಾವರ , ಪ್ರತಿಮಾ ಪ್ರಕಾಶನ ಪಂಜ ಮುಂತಾದ ಸಾಂಸ್ಕೃತಿಕ ಸಾಹಿತ್ಯಕ , ಧಾರ್ಮಿಕ , ಶೈಕ್ಷಣಿಕ ಸಂಸ್ಥೆಗಳ ಜೊತೆ ನಿಕಟ ಸಂಪರ್ಕವನ್ನಿರಿಸಿಕೊಂಡು ಸಕ್ರಿಯವಾಗಿ ತೊಡಗಿಸಿಕೊಂಡು ಸಂತೃಪ್ತ ಜೀವನ ನಡೆಸುವ ಕ್ರಿಯಾಶೀಲ ವ್ಯಕ್ತಿತ್ವದ ಅಪಾರ ಪಾಂಡಿತ್ಯದ ಶ್ರೀ ಮುಡೂರುರವರು ಸುಳ್ಯ ಕಂಡ ಅಪರೂಪದ ಸಾಹಿತಿಯಾಗಿದ್ದರು.

Edited By :
PublicNext

PublicNext

21/04/2022 11:45 am

Cinque Terre

36.66 K

Cinque Terre

0