ಮಂಗಳೂರು: ನಗರದ ಮಾರ್ನಮಿಕಟ್ಟೆ ನಿವಾಸಿ ಕರಾವಳಿ ಕೋಗಿಲೆ ಖ್ಯಾತಿಯ ಗಾಯಕಿ ಹಾಗೂ ಸಂಗೀತ ಗುರು ಶೀಲಾ ದಿವಾಕರ್ (53) ಬುಧವಾರ ಅಸೌಖ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತಿ, ಓರ್ವ ಪುತ್ರ, ಓರ್ವ ಪುತ್ರಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೆದುಳಿನ ರಕ್ತಸ್ರಾವಕ್ಕೆ ಒಳಗಾಗಿದ್ದ ಶೀಲಾ ದಿವಾಕರ್ ಕೆಲವು ದಿನಗಳ ಹಿಂದೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಸಂಗೀತ ಕ್ಷೇತ್ರದಲ್ಲಿ 30 ವರ್ಷಗಳಿಂದ ಸಕ್ರಿಯರಾಗಿದ್ದ ಅವರು ನೂರಾರು ಮಂದಿಗೆ ಸಂಗೀತ ತರಬೇತಿ ನೀಡಿದ್ದು, ಹಲವಾರು ಮಂದಿ ಮೇರು ಪ್ರತಿಭೆಗಳಾಗಿ ಹೊರ ಹೊಮ್ಮಿದ್ದಾರೆ. ಕರಾವಳಿ ಉತ್ಸವ, ಆಳ್ವಾಸ್ ನುಡಿಸಿರಿ, ಧರ್ಮಸ್ಥಳ ಮಹಾಮಸ್ತಕಾಭಿಷೇಕ, ಪರ್ಯಾಯ ಮಹೋತ್ಸವ ಸಹಿತ ರಾಜ್ಯಾದ್ಯಂತ 3,000ಕ್ಕೂ ಅಧಿಕ ಪ್ರಮುಖ ವೇದಿಕೆಗಳಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ, ಭಾವಗೀತೆಗಳಿಂದ ಸಂಗೀತ ಕಾರ್ಯಕ್ರಮಗಳನ್ನು ನೀಡಿ ಜನರ ಪ್ರೀತಿಗೆ ಪಾತ್ರರಾಗಿದ್ದರು.
ಶೀಲಾ ದಿವಾಕರ್‌ಗೆ ಆರ್ಯಭಟ ಪ್ರಶಸ್ತಿ, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ವಿದ್ವತ್ ಸನ್ಮಾನ ಸಹಿತ ಹಲವು ಪ್ರಶಸ್ತಿಗಳು ಲಭಿಸಿದೆ.
Kshetra Samachara
27/01/2022 07:45 am