ಮುಲ್ಕಿ: ಮುಲ್ಕಿ ಸಮೀಪದ ಕಿನ್ನಿಗೋಳಿ ಕೊಸೆಸಾಂವ್ ಅಮ್ಮನವರ ಚರ್ಚ್‌ನ ಮುಖ್ಯ ಧರ್ಮಗುರು ರೆ.ಫಾ. ಮ್ಯಾಥ್ಯೂ ವಾಸ್ (62) ಹೃದಯಾಘಾತದಿಂದ ಇಂದು ಬೆಳಿಗ್ಗೆ ನಿಧನರಾದರು.
ಮೂಲತಃ ಮೂಡಬಿದಿರೆ ಸಮೀಪದ ಸಿದ್ದಕಟ್ಟೆ ನಿವಾಸಿಯಾಗಿದ್ದ ಅವರು, ಕಿನ್ನಿಗೋಳಿ ಚರ್ಚ್ ನಲ್ಲಿ ಕಳೆದ ಮೂರು ವರ್ಷದಿಂದ ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ. ಕಿನ್ನಿಗೋಳಿ ಪರಿಸರದ ವಿವಿಧ ಸಂಘ-ಸಂಸ್ಥೆಗಳೊಂದಿಗೆ ಕ್ರಿಯಾಶೀಲರಾಗಿದ್ದು, ಕೆಲ ವರ್ಷಗಳ ಹಿಂದೆ ಕೆನರಾ ಕಮ್ಯುನಿಕೇಶನ್ ಸಂಸ್ಥೆ ನಿರ್ದೇಶಕರಾಗಿ ಯೇಸು ಕ್ರಿಸ್ತನ ಜನ್ಮ ಚರಿತ್ರೆಯ "ಭುವನ ಜ್ಯೋತಿ" ಚಲನಚಿತ್ರದ ನಿರ್ಮಾಪಕರಾಗಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಕ್ಯಾಥೋಲಿಕ್ ಸಭಾದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಅಂತಿಮ ವಿಧಿವಿಧಾನಗಳು ಕಿನ್ನಿಗೋಳಿ ಚರ್ಚ್ ನಲ್ಲಿ ಅ. 23ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.
Kshetra Samachara
22/10/2021 08:59 am