ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಪ್ಘಾನ್‌ನಲ್ಲಿ ಸಿಕ್ಕಿಬಿದ್ದ ಮಂಗಳೂರಿನ ಸಿಸ್ಟರ್: ಭಾರತಕ್ಕೆ ಬರಲಾಗದೆ ಚಡಪಡಿಕೆ

ಮಂಗಳೂರು: ವಿಶೇಷ ಚೇತನರ ಆರೈಕೆ ಮಾಡಲೆಂದು ಅಪ್ಘಾನ್‌ನಲ್ಲಿರುವ ಮಂಗಳೂರು ಮೂಲದ ಸಿಸ್ಟರ್ ಓರ್ವರು ಇದೀಗ ತಾಲಿಬಾನಿಗಳ ವಶದಲ್ಲಿರುವ ಅಫ್ಘಾನಿಸ್ತಾನದಿಂದ ಮರಳಿ ಭಾರತಕ್ಕೆ ಬರಲಾಗದೆ ಚಡಪಡಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಮೂಲತಃ ಕಾಸರಗೋಡು ಜಿಲ್ಲೆಯ ಬೇಲ ನಿವಾಸಿಯಾಗಿರುವ ಸಿಸ್ಟರ್ ಥೆರೆಸಾ ಕ್ರಾಸ್ತಾ(50) ಈ ಹಿಂದೆ ದ.ಕ.ಜಿಲ್ಲೆಯ ನೆಲ್ಯಾಡಿಯ ಕಾನ್ವೆಂಟೊಂದರಲ್ಲಿ ನನ್ ಆಗಿದ್ದರು. ಬಳಿಕ ಜೆಪ್ಪು ಪ್ರಶಾಂತ ನಿವಾಸ ಆಶ್ರಮದಲ್ಲಿ ವಿಶೇಷ ಚೇತನ ಮಕ್ಕಳನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದರು. ಮಂಗಳೂರಿನ ಸಿಸ್ಟರ್ ಆಫ್ ಚಾರಿಟಿಯಲ್ಲಿದ್ದ ಥೆರೆಸಾ ಕ್ರಾಸ್ತಾ ಅವರಿಗೆ ಇಟಲಿಯ ಎನ್ ಜಿಒ ಒಂದು ಅಫ್ಘಾನಿಸ್ತಾನದ ಕಾಬೂಲ್ ನಲ್ಲಿ ವಿಶೇಷ ಚೇತನ ಮಕ್ಕಳ ಆರೈಕೆ ಮಾಡಲು ಅವಕಾಶ ನೀಡುತ್ತದೆ. ಈ ಹಿನ್ನೆಲೆಯಲ್ಲಿ ಅವರು ಮೂರು ವರ್ಷಗಳ ಹಿಂದೆ ಅಪ್ಘಾನ್ ಗೆ ತೆರಳಿದ್ದರು. ಇತರ ಪಾಕಿಸ್ತಾನಿ ಮೂಲದ ಸಿಸ್ಟರ್ ಗಳ ಜೊತೆ ಥೆರೆಸಾ ಅಲ್ಲಿದ್ದರು.

ಆದರೆ, ಇದೀಗ ತಾಲಿಬಾನಿಗಳು ಅಪ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವುದರಿಂದ ಥೆರೆಸಾ ಕ್ರಾಸ್ತಾ ಅವರು ಭೀತಿಯಲ್ಲಿಯೇ ದಿನ ದೂಡುತ್ತಿದ್ದಾರೆ. ಅಲ್ಲದೆ ಮರಳಿ ಭಾರತಕ್ಕೆ ಬರಲಾಗದೆ ಆತಂಕದಲ್ಲಿದ್ದಾರೆ. ಕಾಬೂಲ್ ನ ವಿಮಾನ ನಿಲ್ದಾಣದ ಬಳಿಯಲ್ಲೇ ಸಿಸ್ಟರ್ ಥೆರೆಸಾ ಕ್ರಾಸ್ತಾ ಇದ್ದಾರೆಂಬ ಮಾಹಿತಿ ಇದೆ. ಆದರೆ, ಆಶ್ರಮದಿಂದ ಹೊರಗೆ ಬರುವಂತೆ ಇಲ್ಲ. ಹೊರಗೆ ಏನಾಗುತ್ತಿದೆ ಎಂದು ನೋಡುವುದಕ್ಕೂ ಸಾಧ್ಯವಾಗದ ಸ್ಥಿತಿಯಿದೆ. 30 ಜನ ಅನಾಥ ವಿಶೇಷ ಚೇತನ ಮಕ್ಕಳ ರಕ್ಷಣೆ ಮತ್ತು ಪಾಲನೆಯ ಹೊಣೆ ಹೊತ್ತಿರುವ ಅವರು ಅಲ್ಲಿಂದ ಹೇಗೆ ಬರುವುದು ಎನ್ನುವ ಚಿಂತೆಯಲ್ಲಿದ್ದಾರೆ. ಥೆರೆಸಾ ಕ್ರಾಸ್ತಾ ಇರುವ ಕಟ್ಟಡದ ಹೊರಭಾಗದಲ್ಲಿ ಮಿಲಿಟರಿ ಸೆಕ್ಯುರಿಟಿ ಇದೆ. ಹಾಗಾಗಿ ಹೊರಗೆ ಹೋಗುವುದು ಸಾಧ್ಯವಿಲ್ಲ. ಇನ್ನೂ ಅವರನ್ನು ಅಲ್ಲಿಂದ ಭಾರತಕ್ಕೆ ಸುರಕ್ಷಿತವಾಗಿ ಕರೆತರುವ ಬಗ್ಗೆ ಯಾರು ಕೂಡ ಸಂಪರ್ಕಿಸಿಲ್ಲ. ಸದ್ಯಕ್ಕೆ ಸುರಕ್ಷಿತವಾಗಿರುವುದಾಗಿ ಮಂಗಳೂರಿನ ಡಯಾಸಿಸ್ ಗೆ ಥೆರೆಸಾ ತಿಳಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

19/08/2021 10:59 pm

Cinque Terre

16.86 K

Cinque Terre

20