ಉಡುಪಿ: ಉಡುಪಿ ಜಿಲ್ಲೆಯ ರೋಟರಿ ಆನ್ಸ್ ಕ್ಲಬ್ ಕಾರ್ಕಳ, ಮಹಿಳಾ ಸೌಂದರ್ಯ ತಜ್ಞೆಯರ ಸಂಘ ಮತ್ತು ಯುವವಾಹಿನಿ ವಿಶೇಷ ಮಾನವೀಯ ಕಾರ್ಯ ಹಮ್ಮಿಕೊಂಡಿದೆ.
ಕ್ಯಾನ್ಸರ್ ಕಾಯಿಲೆಯಿಂದಾಗಿ ತಲೆಗೂದಲನ್ನು ಕಳೆದುಕೊಂಡಿರುವ ವ್ಯಕ್ತಿಗಳ ಮುಖದಲ್ಲಿ ಮಂದಹಾಸ ಮೂಡಿಸುವ ಅಪೂರ್ವ ಕಾರ್ಯಕ್ರಮ ಇದಾಗಿದೆ. ಫೆ. 21ರಂದು ರೋಟರಿ ಬಾಲಭವನದಲ್ಲಿ ಇಂತಹದೊಂದು ಕೈಂಕರ್ಯ ಹಮ್ಮಿಕೊಂಡಿದೆ. ಅದುವೇ ಕೇಶ ದಾನ ಕಾರ್ಯಕ್ರಮ!
ಕೇಶ ದಾನ ಮಾಡ ಬಯಸುವವರು ಈ ಕಾರ್ಯಕ್ರಮಕ್ಕೆ ಬಂದು ಕೇಶ ದಾನ ಮಾಡುವ ಮೂಲಕ ಕ್ಯಾನ್ಸರ್ ರೋಗಿಗಳಿಗೆ ಸಹಾಯ ಮಾಡಬಹುದು ಎಂದು ಕಾರ್ಕಳ ರೋಟರಿ ಆನ್ಸ್ ಕ್ಲಬ್ ಅಧ್ಯಕ್ಷೆ ನಮಿತಾ ಶೈಲೇಂದ್ರ ರಾವ್ ಹೇಳಿದ್ದಾರೆ.
ಹೀಗೆ ಸಂಗ್ರಹವಾದ ಕೇಶವನ್ನು ಕ್ಯಾನ್ಸರ್ ನಿಂದಾಗಿ ತಲೆಗೂದಲನ್ನು ಕಳೆದುಕೊಂಡವರಿಗೆ ಉಚಿತವಾಗಿ ನೀಡಲಾಗುತ್ತದೆ. ಇಂತಹದೊಂದು ಸಾಮಾಜಿಕ ಕಳಕಳಿಯ ಕಾರ್ಯಕ್ರಮದಲ್ಲಿ ಹೆಚ್ಚು ಹೆಚ್ಚು ಜನರು ಆಗಮಿಸಿ ಕೂದಲ ದಾನ ಮಾಡಬೇಕು ಎಂದು ಅವರು ವಿನಂತಿಸಿದರು. ಸುದ್ದಿಗೋಷ್ಠಿಯಲ್ಲಿ ಮರಿಯಾ ಮೋಲಿ, ವೇದಾ ಎಸ್. ಸುವರ್ಣ, ತಾರಾನಾಥ್ ಕೋಟ್ಯಾನ್ ಉಪಸ್ಥಿತರಿದ್ದರು.
Kshetra Samachara
08/02/2021 02:39 pm