ಮಂಗಳೂರು: ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ಮಂಗಳೂರಿನ ಖ್ಯಾತ ಹೃದ್ರೋಗ ತಜ್ಞ ಡಾ.ಬಿ.ಎಂ.ಹೆಗ್ಡೆಯವರಿಗೆ ಇಂದು ಕೇಂದ್ರ ಸರಕಾರದ ಅತ್ಯುನ್ನತ ಗೌರವ ಪ್ರಶಸ್ತಿ ಪದ್ಮವಿಭೂಷಣ ಘೋಷಣೆಯಾಗಿದೆ.
ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಗೆ ಈ ಪ್ರಶಸ್ತಿಗೆ ಅವರು ಭಾಜನರಾಗಿದ್ದಾರೆ. ಡಾ.ಬಿ.ಎಂ.ಹೆಗ್ಡೆಯವರ ಪೂರ್ಣ ಹೆಸರು ಡಾ.ಬೆಳ್ಳೆ ಮೋನಪ್ಪ ಹೆಗ್ಡೆ. ಹೃದಯ ತಜ್ಞರಾಗಿ ಖ್ಯಾತರಾಗಿದ್ದ ಅವರು, ಉಡುಪಿ ತಾಲೂಕಿನ ಬೆಳ್ಳೆ ಗ್ರಾಮದಲ್ಲಿ 1938 ಆಗಸ್ಟ್ 18ರಂದು ಜನಿಸಿದರು. ಉಡುಪಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಮದ್ರಾಸ್ ವಿವಿಯಿಂದ ಎಂಬಿಬಿಎಸ್ ಪದವಿ, ಲಕ್ನೋ ವಿವಿಯಿಂದ ಎಂಡಿ ಪದವಿ ಗಳಿಸಿದ್ದರು.
ಆ ಬಳಿಕ ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡ್ ಗೆ ತೆರಳಿ ಅಲ್ಲಿರುವ ಎಲ್ಲ ರಾಯಲ್ ಕಾಲೇಜುಗಳ ಫೆಲೋ ಆಗಿರುವ ಪ್ರಪ್ರಥಮ ಹಾಗೂ ಏಕೈಕ ಕನ್ನಡಿಗ ಮತ್ತು ಭಾರತೀಯ ಎಂಬ ಹೆಗ್ಗಳಿಕೆ ಗಳಿಸಿಕೊಂಡಿದ್ದಾರೆ. ಅಲ್ಲದೆ ಇವರು ನೋಬೆಲ್ ಪುರಸ್ಕೃತ ಪ್ರೊ.ಬೆರ್ನಾಡ್ ಲೋವ್ನ್ ರಂತಹ ವೈದ್ಯರೊಂದಿಗೂ ಕೆಲಸ ಮಾಡಿದ್ದಾರೆ.
ಮಣಿಪಾಲ ಕಸ್ತೂರ್ಬಾ ವೈದ್ಯಕೀಯ ವಿವಿಯಲ್ಲಿ ಪ್ರಾಧ್ಯಾಪಕರಾಗಿದ್ದ ಡಾ.ಬಿ.ಎಂ.ಹೆಗ್ಡೆಯವರು, ಡೀನ್ ಆಗಿಯೂ ಸೇವೆ ಸಲ್ಲಿಸಿದ್ದರು. ಅಲ್ಲದೆ, ಮಣಿಪಾಲದ ಉನ್ನತ ಶಿಕ್ಷಣ ಸಂಸ್ಥೆ(ಮಾಹೆ) ಉಪಕುಲಪತಿ ಯಾಗಿಯೂ ಸೇವೆ ಸಲ್ಲಿಸಿದ್ದರು. ಲಂಡನ್ ವಿವಿಯ ಶಾಶ್ವತ ಸಂದರ್ಶಕ ಪ್ರಾಧ್ಯಾಪಕರೂ ಆಗಿದ್ದಾರೆ. ನಿಷ್ಠುರವಾದಿಯಾಗಿರುವ ಡಾ.ಬಿ.ಎಂ.ಹೆಗ್ಡೆಯವರು, ವೈದ್ಯಕೀಯ ವಲಯದಲ್ಲಿನ ಹುಳುಕುಗಳನ್ನು ಯಾವುದೇ ಸಂಕೋಚ, ಮುಲಾಜಿಲ್ಲದೆ ಎತ್ತಿ ತೋರಿಸಿದವರು, ಅನಗತ್ಯ ವೈದ್ಯಕೀಯ ತಪಾಸಣೆ, ಅನಾವಶ್ಯಕ ಔಷಧಿ, ಚಿಕಿತ್ಸೆಗಳನ್ನು ಉಗ್ರವಾಗಿ ಖಂಡಿಸಿದವರು. ಅಲೋಪಥಿ ವೈದ್ಯಶಾಸ್ತ್ರ ಅಭ್ಯಸಿಸಿದ್ದರೂ ಆಯುರ್ವೇದ, ಪ್ರಕೃತಿ ಚಿಕಿತ್ಸೆ ಹಾಗೂ ಯೋಗಕ್ಕೆ ಆದ್ಯತೆ ನೀಡಿದ ಅವರು, ಈ ಕಾರಣಕ್ಕಾಗಿಯೇ ಬಹಳಷ್ಟು ಮಂದಿಯ ವಿರೋಧವನ್ನೂ ಕಟ್ಟಿಕೊಂಡಿದ್ದಾರೆ.
ಹೃದಯ ತಜ್ಞರಾಗಿರುವ ಡಾ.ಬಿ.ಎಂ.ಹೆಗ್ಡೆಯವರು ವೈದ್ಯರಾಗಿ, ಅಧ್ಯಾಪಕರಾಗಿ, ಪರೀಕ್ಷಕರಾಗಿ, ಸಂಶೋಧಕರಾಗಿ, ಬರಹಗಾರರಾಗಿ, ಶಿಕ್ಷಣ ತಜ್ಞರಾಗಿ, ವಾಗ್ಮಿಯಾಗಿಯೂ ಪ್ರಸಿದ್ಧರಾಗಿದ್ದಾರೆ. ನೂರಕ್ಕೂ ಅಧಿಕ ಅಂತಾರಾಷ್ಟ್ರೀಯ ಭಾಷಣವನ್ನು ಮಾಡಿರುವ ಡಾ.ಬಿ.ಎಂ.ಹೆಗ್ಡೆಯವರು, ಬಿಬಿಸಿ, ದೂರದರ್ಶನ ಹಾಗೂ ಮತ್ತಿತರ ವಾಹಿನಿಗಳಲ್ಲಿ ಆರೋಗ್ಯ ಕಾರ್ಯಕ್ರಮ, ಭಾಷಣಗಳನ್ನು ಮಾಡಿದ್ದಾರೆ. ಇಂಗ್ಲಿಷ್ ಹಾಗೂ ಕನ್ನಡದಲ್ಲಿ 35 ಕ್ಕೂಅಧಿಕ ಗ್ರಂಥಗಳನ್ನು ರಚಿಸಿದ್ದಾರೆ. ಎಂಟಕ್ಕೂ ಹೆಚ್ಚು ಭಾಷೆಯಲ್ಲಿ ಲೀಲಾಜಾಲವಾಗಿ ಮಾತನಾಡುವ ಅವರ ಆರೋಗ್ಯ ಕಾರ್ಯಕ್ರಮಗಳು ಸಾಮಾನ್ಯರಲ್ಲಿ ಸಾಮಾನ್ಯರಿಗೂ ಅರ್ಥವಾಗುವಷ್ಟು ಸರಳ.
ಬಿ.ಎಂ.ಹೆಗ್ಡೆಯವರಿಗೆ ಅನೇಕ ಪ್ರಶಸ್ತಿಗಳು ಅರಸಿ ಬಂದಿದ್ದು, ಪದ್ಮಭೂಷಣ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ, ಡಾ.ಬಿ.ಸಿ.ರಾವ್ ಪ್ರಶಸ್ತಿ ಲಭಿಸಿವೆ. ಇದೀಗ ದೇಶದ ಅತ್ಯುನ್ನತ ಗೌರವ ಪ್ರಶಸ್ತಿ ಪದ್ಮಭೂಷಣಕ್ಕೆ ಭಾಜನರಾಗಿದ್ದಾರೆ.
Kshetra Samachara
25/01/2021 11:38 pm