ಸುರತ್ಕಲ್: ಕಳೆದ 32 ವರ್ಷಗಳಿಂದ ರವಿವಾರ ಸಂತೆ ವ್ಯಾಪಾರ ಮಾಡುತ್ತಿದ್ದ ಬಡವರನ್ನು ಯಾವುದೇ ಕಾರಣಕ್ಕೂ ಬೀದಿಪಾಲು ಮಾಡಬಾರದು. ಮತ್ತೆ ರವಿವಾರ ಸಂತೆಗೆ ಅನುಮತಿ ನೀಡಬೇಕು. ಇಲ್ಲದಿದ್ದರೆ ಪಾಲಿಕೆ ವಿರುದ್ಧ ನಿರಂತರ ಹೋರಾಟ ಅನಿವಾರ್ಯ ಎಂದು ಇಂಟಕ್ ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್ ಮಲ್ಲಿ ಹೇಳಿದರು.
ಸುರತ್ಕಲ್ ನಲ್ಲಿ ರವಿವಾರ ನಡೆಯುತ್ತಿದ್ದ ಸಂತೆ ವ್ಯಾಪಾರ ಬಂದ್ ಮಾಡಿರುವುದನ್ನು ವಿರೋಧಿಸಿ ಇಂಟಕ್ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ಕಾಂಗ್ರೆಸ್ ಮುಖಂಡರೊಂದಿಗೆ ಚರ್ಚಿಸಿ ಜಿಲ್ಲಾಧಿಕಾರಿಯವರಿಗೆ ರವಿವಾರ ಸಂತೆಗೆ ಅನುಮತಿ ನೀಡಲು ಮನವಿ ಮಾಡಲಾಗುವುದು. ನೀಡದೆ ಹೋದಲ್ಲಿ ಹೋರಾಟದ ಹಾದಿ ತುಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ ಮಾತನಾಡಿ, ಸುಪ್ರೀಂ ಕೋರ್ಟ್ ಬೀದಿಬದಿ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಿ ಎಂದು ಹೇಳಿದೆ. ಮಾತ್ರವಲ್ಲದೆ, ಇದೀಗ ಆರ್ಥಿಕ ಸಹಾಯವನ್ನೂ ನೀಡಲಾಗುತ್ತಿದೆ. ಆದರೆ, ಸುರತ್ಕಲ್ ನಲ್ಲಿ ಮಾತ್ರ ಮಂಗಳೂರು ಮಹಾನಗರ ಪಾಲಿಕೆ ಬೀದಿಬದಿ
ವ್ಯಾಪಾರಿಗಳಿಗೆ ಅವಕಾಶ ನಿರಾಕರಿಸುತ್ತಿದೆ.
ಯಾವುದೇ ತೊಂದರೆ ಇಲ್ಲದೆ ವ್ಯಾಪಾರ ಮಾಡುವ ಬಡವರ ವಿರುದ್ದ ಯಾರಿಗೆ ದ್ವೇಷವಿದೆ ಎಂಬುದು ಅರ್ಥವಾಗುತ್ತಿಲ್ಲ. ಸ್ಟೇಟ್ ಬ್ಯಾಂಕ್ ಬಳಿ ನಿತ್ಯವೂ ವ್ಯಾಪಾರವಿದೆ, ಬಿಕರ್ನಕಟ್ಟೆಯಲ್ಲಿ ಸಂತೆಯಿದೆ. ಉತ್ತರ ಕರ್ನಾಟಕದಲ್ಲಿ ಸಾವಿರಾರು ಕುಟುಂಬಗಳು ಬದುಕಿನ ಹಾದಿ ಕಂಡುಕೊಂಡಿದೆ. ತತ್ ಕ್ಷಣ ಪಾಲಿಕೆ ರವಿವಾರದ ಸಂತೆ ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕೆಂದು ಆಗ್ರಹಿಸಿದರು.
ಇಂಟಕ್ ಜಿಲ್ಲಾಧ್ಯಕ್ಷ ಮನೋಹರ್ ಶೆಟ್ಟಿ ಮಾತನಾಡಿ, ಕೊರೊನಾ ಸಂದರ್ಭ ನಾವು ಸರಕಾರದ ನಿರ್ದೇಶನ ಪಾಲಿಸಿದ್ದೆವು. ಆ ಬಳಿಕ ಪಾಲಿಕೆ ಏಕಾಏಕಿ ರವಿವಾರ ಸಂತೆಗೆ ನಿರ್ಬಂಧ ಹೇರಿತು. ಈ ಬಗ್ಗೆ ಪಾಲಿಕೆ ಆಯುಕ್ತರಿಗೆ,ಶಾಸಕರಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಈಗಿನ ಆಡಳಿತಕ್ಕೆ ಬಡವರ ಬಗ್ಗೆ ಕಾಳಜಿಯಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಮಾಜಿ ಉಪಮೇಯರ್ ಪುರುಷೋತ್ತಮ್ ಚಿತ್ರಾಪುರ ಮಾತನಾಡಿ,ಕೊರೊನಾ ಬಳಿಕ ಎಲ್ಲರೂ ಭಾಗಶಃ ಬೀದಿಗೆ ಬಂದಿದ್ದು, ವಿದ್ಯಾವಂತರು ಕೆಲಸ ಕಳೆದುಕೊಂಡು ಹಣ್ಣು- ತರಕಾರಿ ಮಾರುತ್ತಿದ್ದಾರೆ. ಅಡವಿಟ್ಟ ಚಿನ್ನ,ಆಸ್ತಿ ಬಿಡಿಸಿಕೊಳ್ಳಲಾಗದೆ ಕಷ್ಟಪಟ್ಟು ಸಂಪಾದಿಸಿದ ವಸ್ತು ಏಲಂ ಆಗುತ್ತಿವೆ. ಸರಕಾರ ಉದ್ಯೋಗವೂ ಕೊಡುತ್ತಿಲ್ಲ. ಈ ನಡುವೆ ಬೀದಿಯಲ್ಲಿ ವ್ಯಾಪಾರ ಮಾಡಿ ಕುಟುಂಬ ಸಾಕುತ್ತೇವೆ ಎಂದು ಹೇಳಿದರೆ ಪಾಲಿಕೆಗೆ ಮಾನವೀಯತೆಯೇ ಇಲ್ಲದಂತೆ ವರ್ತಿಸುತ್ತಿದೆ. ಬಡವರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕೆ? ಇನ್ನು ಸಂತೆ ಬದಲು ಬೀದಿಬದಿ ವ್ಯಾಪಾರ ಮಾಡಿ. ಸರಕಾರವೇ ಹತ್ತು ಸಾವಿರ ಹಣಕಾಸಿನ ನೆರವು ಕೊಡುತ್ತದೆ. ಪಾಲಿಕೆ ಮರ್ಜಿಗೆ ಕಾಯಬೇಡಿ ಎಂದರು.
ಸ್ಥಳೀಯ ಸಂತೆ ವ್ಯಾಪಾರಿಗಳು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು.ಇಂಟಕ್ ಮುಖಂಡರಾದ ಅಬೂಬಕ್ಕರ್ ಕೃಷ್ಣಾಪುರ, ಚಿತ್ತರಂಜನ್ ಶೆಟ್ಟಿ ಬೊಂಡಾಲ, ಯುವ ಇಂಟಕ್ ಕಾರ್ಯದರ್ಶಿ ದಿನಕರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
24/01/2021 06:35 pm