ಉಡುಪಿ: ಉಡುಪಿ ಜಿಲ್ಲೆಯ ಸರಕಾರಿ ಕಚೇರಿಗಳಲ್ಲಿ ಖಾಲಿ ಇರುವ ಉದ್ಯೋಗವನ್ನು ನಮ್ಮ ಉಡುಪಿ ಜಿಲ್ಲೆಯ ಬಡ ವಿದ್ಯಾವಂತ ನಿರುದ್ಯೋಗಿ ಯುವಕ ಯುವತಿಯರಿಗೆ ನೀಡಬೇಕು. ಉಡುಪಿ ಜಿಲ್ಲೆಯಲ್ಲಿ ಹಿಂದಿ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆ ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಸಮಿತಿ ಆಗ್ರಹಿಸಿದೆ.
ಇಂದು ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾ ಅಧ್ಯಕ್ಷ ಸುಜಯ ಪೂಜಾರಿ ಮತ್ತು ಜಿಲ್ಲಾ ಪದಾಧಿಕಾರಿಗಳು, ಉಡುಪಿ ಜಿಲ್ಲೆಯ ನಗರಸಭಾ ವ್ಯಾಪ್ತಿ ಮತ್ತು ಪಂಚಾಯತ್ ವ್ಯಾಪ್ತಿಗೆ ಬರುವ ಎಲ್ಲ ಅಂಗಡಿ-ಮುಂಗಟ್ಟು, ಹೊಟೇಲು ಮತ್ತು ಕಂಪನಿಗಳಲ್ಲಿ ಕಡ್ಡಾಯವಾಗಿ ಕನ್ನಡ ನಾಮಫಲಕವನ್ನು ಅಳವಡಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಕ್ಷಣಾ ವೇದಿಕೆಯು ಕಳೆದ 21 ವರ್ಷಗಳಿಂದ ನಿರಂತರವಾಗಿ ಕನ್ನಡಿಗರ ಬದುಕು ಉದ್ಯೋಗದ ಹಕ್ಕುಗಳ ಕುರಿತು ಹೋರಾಟಗಳನ್ನು ನಡೆಸುತ್ತಲೇ ಬಂದಿದೆ.ಇಂಗ್ಲಿಷ್, ಹಿಂದಿ ಜೊತೆಯಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆಗಳನ್ನು ಬರೆಯುವ ಅವಕಾಶ ಕಲ್ಪಿಸಿದೆ.
ಕರ್ನಾಟಕ ರಕ್ಷಣಾ ವೇದಿಕೆ ಅತ್ಯಂತ ಮುಖ್ಯ ಗುರಿ ಒಕ್ಕೂಟದ ಮೂಲತತ್ವಗಳ ಮೇಲಾಗುತ್ತಿರುವ ದಾಳಿಯನ್ನು ತಡೆಗಟ್ಟುವುದು.ಇದಕ್ಕಾಗಿ ರಕ್ಷಣಾ ವೇದಿಕೆಯು ಹಲವು ಬಗೆಗಳಲ್ಲಿ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ.ಈ ಎಲ್ಲ ಮುಖ್ಯ ಗುರಿಗಳನ್ನು ಇಟ್ಟುಕೊಂಡು ಕರ್ನಾಟಕ ರಕ್ಷಣಾ ವೇದಿಕೆಯು ಜಿಲ್ಲಾಧ್ಯಕ್ಷ ಪೂಜಾರಿ ಸುಜಯ ಪೂಜಾರಿ ಮುಂದಾಳುತ್ವದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.
Kshetra Samachara
15/01/2021 04:51 pm