ಉಡುಪಿ: ಮಣಿಪಾಲದಲ್ಲಿ ವಿದ್ಯಾರ್ಥಿಯೊಬ್ಬ ಇಂದು ಬೆಳ್ಳಂಬೆಳಗ್ಗೆಯೇ ಭಾರಿ ಅವಾಂತರವನ್ನೇ ಸೃಷ್ಟಿಸಿ ಬಿಟ್ಟಿದ್ದ.
ರಾತ್ರಿಯಿಡೀ ಮೊಬೈಲ್ ನಲ್ಲಿ ಗೇಮ್ ಅಡುತ್ತಿದ್ದ ವಿದ್ಯಾರ್ಥಿಗೆ ಆತನ ತಾಯಿ ದಬಾಯಿಸಿ, ಆತನಿಂದ ಮೊಬೈಲ್ ಕಿತ್ತುಕೊಂಡೇ ಬಿಟ್ಟಿದ್ದರು. ಇದರಿಂದ ಭಾರಿ ಕೋಪಗೊಂಡ ತರುಣ ಬಾತ್ ರೂಮ್ ಬಾಗಿಲು ಹಾಕಿ ಒಳಗಡೆ ಕೂತೇ ಬಿಟ್ಟಿದ್ದಾನೆ!
ಅದೆಷ್ಟು ಕರೆದರೂ ಬಾಗಿಲು ತೆರೆಯದೇ ಗಂಟೆಗಟ್ಟಲೆ ಕೂತು ಹೈಡ್ರಾಮವನ್ನೇ ಸೃಷ್ಟಿಸಿದ.
ಘಟನೆ ನಡೆದಿದ್ದು ಮಣಿಪಾಲದ ಎಂಐಟಿ A1 ಅಪಾರ್ಟ್ ಮೆಂಟ್ ನ ನಾಲ್ಕನೇ ಮಹಡಿಯಲ್ಲಿ. ಮಗನನ್ನು ಎಷ್ಟೇ ಮನವೊಲಿಕೆ ಮಾಡಿದರೂ ಬಾಗಿಲು ಮಾತ್ರ ತೆಗೆಯಲೇ ಇಲ್ಲ. ಕೊನೆಗೆ ಆತಂಕಗೊಂಡ ವಿದ್ಯಾರ್ಥಿ ಯ ತಾಯಿ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿದ್ದಾರೆ.
ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ನಾಲ್ಕನೇ ಮಹಡಿಗೆ ಹಗ್ಗದ ಸಹಾಯದಿಂದ ಸಾಹಸಿಕವಾಗಿ ಇಳಿದು ಬಾತ್ ರೂಮ್ ಕಿಟಕಿ ಮುರಿದು ಒಳ ಪ್ರವೇಶಿಸಿದ್ದಾರೆ. ಆಗ ಮಾನಸಿಕವಾಗಿ ನೊಂದಿದ್ದ ತರುಣ ಬಾತ್ ರೂಮ್ ನೊಳಗಡೆ ಅರೆಪ್ರಜ್ಞಾವಸ್ಥೆಯಲ್ಲಿ ಮಲಗಿದ್ದ! ಬಳಿಕ ಆತನನ್ನು ಉಪಚರಿಸಿ, ಹೊರಗಡೆ ಕರೆತಂದು ಸಮಾಧಾನಗೊಳಿಸಿದ್ದಾರೆ.
ಅಗ್ನಿ ಶಾಮಕ ದಳದ ಯಶಸ್ವಿ ಕಾರ್ಯಾಚರಣೆಯನ್ನು ಸಾರ್ವಜನಿಕರು ಮುಕ್ತ ಕಂಠದಿಂದ ಹೊಗಳಿದ್ದು, ತಮ್ಮ ಪ್ರಾಣದ ಹಂಗು ತೊರೆದು ತರುಣನ ರಕ್ಷಣೆ ಮಾಡಿದ್ದಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಈ ಕಾರ್ಯಾಚರಣೆಯಲ್ಲಿ ಅಗ್ನಿ ಶಾಮಕ ದಳದ ಮುಖ್ಯ ಅಧಿಕಾರಿ ವಸಂತ್ ಕುಮಾರ್ , ಅಶ್ವಿನ್ ಸನಿಲ್, ಸುಧಾಕರ್ ದೇವಾಡಿಗ ,ರವಿ ನಾಯಕ್ ,ಚಾಲಕ ಅಲ್ವಿನ್ ಪ್ರಶಾಂತ್,ಗೃಹರಕ್ಷಕರಾದ ಪ್ರಭಾಕರ್, ದಾವೂದ್, ಹಕೀಮ್ ಪಾಲ್ಗೊಂಡಿದ್ದರು.
ಮಣಿಪಾಲ ಯುನಿವರ್ಸಿಟಿಯ ಪ್ರಭುದೇವ್ ಮಾಣೆ ತಂಡ ಸಹಕಾರ ನೀಡಿದೆ.
Kshetra Samachara
02/01/2021 04:50 pm