ಮೂಡುಬಿದಿರೆ: ದ.ಕ.ಜಿ.ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳೂರು, ಸಮುದಾಯ ಆರೋಗ್ಯ ಕೇಂದ್ರ ಮೂಡುಬಿದಿರೆ ಹಾಗೂ ಇನ್ನರ್‌ವ್ಹೀಲ್ ಕ್ಲಬ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಪೋಷಣ್ ಮಾಸಾಚರಣೆ ಕಾರ್ಯಕ್ರಮವು ಸೋಮವಾರ ಸಮಾಜ ಮಂದಿರದಲ್ಲಿ ನಡೆಯಿತು.
ಇನ್ನರ್‌ವ್ಹೀಲ್ ಕ್ಲಬ್‌ನ ಅಧ್ಯಕ್ಷೆ ರಮ್ಯಾ ವಿಕಾಸ್ ಗುಲಾಬಿ ಹೂವಿನ ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲ ಅವರು ಪೌಷ್ಠಿಕ ಆಹಾರ ಮತ್ತು ಎದೆ ಹಾಲಿನ ಮಹತ್ವದ ಬಗ್ಗೆ ಮಾಹಿತಿ ನೀಡಿ ಒತ್ತಡದ ಕಾರಣದಿಂದಾಗಿ ನಾವು ರೆಡಿಮೆಡ್ ಆಹಾರಗಳಿಗೆ ಹೆಚ್ಚಿನ ಒತ್ತನ್ನು ನೀಡುತ್ತಿರುವುದರಿಂದ ಆರೋಗ್ಯದ ಮೇಲೆ ದುಷ್ಪಾರಿಣಾಮಗಳಾಗುತ್ತಿವೆ. ಮಹಿಳೆಯರು ಮಕ್ಕಳಿಗೆ ಎದೆ ಹಾಲನ್ನು ನೀಡುವುದರಿಂದ ಆರೋಗ್ಯವಂತ ಮಕ್ಕಳಾಗಿ ಬೆಳೆಯುತ್ತಾರೆ. ಮನೆಯಲ್ಲಿಯೇ ತರಕಾರಿ, ಹಾಲು, ಮೊಟ್ಟೆಯಂತಹ ಪೌಷ್ಠಿಕ ಆಹಾರಗಳ ಜತೆಗೆ ಹೆಚ್ಚಾಗಿ ನೀರನ್ನೂ ಕುಡಿಯಬೇಕು. ಪ್ಲಾಸ್ಟಿಕ್ ವಷ್ತುಗಳಲ್ಲಿ ಆಹಾರವನ್ನು ಸೇವಿಸುವುದನ್ನು ನಿಲ್ಲಿಸಬೇಕು ಇದರಿಂದಾಗಿ ಆರೋಗ್ಯವಂತರಾಗಿ ಜೀವಿಸಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳ ಮಕ್ಕಳ ಹೆತ್ತವರು ಪೌಷ್ಠಿಕಾಂಶವುಳ್ಳ ಆಹಾರ ಪದಾರ್ಥಗಳನ್ನು ತಯಾರಿಸಿ ತಂದಿದ್ದು ಅವುಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಇನ್ನರ್‌ವ್ಹೀಲ್ ಕ್ಲಬ್‌ನ ಕಾರ್ಯದರ್ಶಿ ಸ್ವಾತಿ ಬೋರ್ಕರ್, ಮಾಜಿ ಅಧ್ಯಕ್ಷರುಗಳಾದ ಜಯಶ್ರೀ ಅಮರನಾಥ ಶೆಟ್ಟಿ, ಮೀನಾಕ್ಷಿ ನಾರಾಯಣ್ ಉಪಸ್ಥಿತರಿದ್ದರು. ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಮೀನಾಕ್ಷಿ ವಂದಿಸಿದರು.
Kshetra Samachara
19/09/2022 06:21 pm