ಮೂಡುಬಿದಿರೆ : ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಆಗುವ ದುಷ್ಪಾರಿಣಾಮಗಳು ಹಾಗೂ ಮನುಷ್ಯರಿಗೆ ಆಗುವಂತಹ ತೊಂದರೆಗಳ ಬಗ್ಗೆ ಸಾರ್ವಜನಿಕರಿಗೆ ಮನಮುಟ್ಟುವಂತೆ ತಿಳಿ ಹೇಳಿದ ವಿದ್ಯಾರ್ಥಿಗಳು, ಪ್ಲಾಸ್ಟಿಕ್ ಚೀಲಗಳನ್ನು ತಂದು ಅದರಲ್ಲಿ ತರಕಾರಿ ಸಹಿತ ಇತರ ವಸ್ತುಗಳನ್ನು ತುಂಬಿಸಿಕೊಂಡು ಹೋಗುತ್ತಿದ್ದವರಿಗೆ ಶುಕ್ರವಾರದಂದು ಬಟ್ಟೆಯ ಚೀಲಗಳನ್ನು ನೀಡಿ ಜಾಗೃತಿ ಮೂಡಿಸಿದರು.
ಮೂಡುಬಿದಿರೆ ಪುರಸಭೆಯ ಸಹಕಾರದೊಂದಿಗೆ ಜೈನ ಪ.ಪೂ.ಕಾಲೇಜಿನ ಇಕೋ ಕ್ಲಬ್ 28 ವಿದ್ಯಾರ್ಥಿಗಳು ಮೂಡುಬಿದಿರೆಯಲ್ಲಿ ಶುಕ್ರವಾರದಂದು ನಡೆಯುವ ವಾರದ ಸಂತೆಗೆ ಆಗಮಿಸಿ ಅಲ್ಲಿ ಪ್ಲಾಸ್ಟಿಕ್ ಕೈ ಚೀಲಗಳನ್ನು ಬಳಕೆ ಮಾಡುತ್ತಿದ್ದ ವ್ಯಾಪಾರಸ್ಥರಿಗೆ ಮತ್ತು ಗ್ರಾಹಕರಿಗೆ ಪ್ಲಾಸ್ಟಿಕ್ ಚೀಲಗಳನ್ನು ಬಳಕೆ ಮಾಡದಂತೆ ಮನವರಿಕೆ ಮಾಡಿ ತಾವು ಮಾರಾಟಕ್ಕೆ ತಂದಿರುವ ೧೦೦ಬಟ್ಟೆಯ ಚೀಲಗಳನ್ನು ಮಾರಾಟ ಮಾಡಿದರು.
ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್ ಅವರಿಗೆ ಮೊದಲಿಗೆ ಬಟ್ಟೆಯ ಚೀಲವನ್ನು ಮಾರಾಟ ಮಾಡಿದರು. ಮುಖ್ಯಾಧಿಕಾರಿ ಇಂದು.ಎಂ ಅವರೂ ವಿದ್ಯಾರ್ಥಿಗಳಿಂದ ಬಟ್ಟೆ ಚೀಲವನ್ನು ಖರೀದಿಸಿಕೊಂಡರು. ಇದಲ್ಲದೆ ಮಾರ್ಕೆಟಿಗೆ ಬಂದಿರುವ ವಿವಿಧ ಶಿಕ್ಷಣ ಸಂಸ್ಥೆಯ ಉಪನ್ಯಾಸಕರು, ಶಿಕ್ಷಕರು ಹಾಗೂ ಸಾರ್ವಜನಿಕರು ವಿದ್ಯಾರ್ಥಿಗಳು ಮಾರಾಟ ಮಾಡುತ್ತಿದ್ದ ಬಟ್ಟೆಯ ಚೀಲಗಳನ್ನು ಖರೀದಿಸಿ ಪ್ರೋತ್ಸಾಹ ನೀಡಿದರು.
ಜೈನ ಪ.ಪೂ.ಕಾಲೇಜಿನ ಉಪನ್ಯಾಸಕಿ ಸಂಧ್ಯಾ ಅವರು ವಿದ್ಯಾರ್ಥಿಗಳನ್ನು ಈ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿವಂತೆ ಪ್ರೇರೇಸಿದರು. ಇಕೋಕ್ಲಬ್ ನ ವಿದ್ಯಾರ್ಥಿ ಮಹಮ್ಮದ್ ಅಫ್ರೀನ್ ಮಾತನಾಡಿ ಇಂದು ತಾವು ಮಾರಾಟಕ್ಕೆ ತಂದಿರುವ 100 ಬಟ್ಟೆಯ ಚೀಲಗಳನ್ನು ಗ್ರಾಹಕರು ಖರೀದಿಸಿಕೊಂಡಿದ್ದಾರೆ. ಆದರೆ ಮೊದಲಿಗೆ ಬಟ್ಟೆಯ ಚೀಲಗಳನ್ನು ಖರೀಧಿಸಲು ಹಿಂಜರಿದಿದ್ದಾರೆ ಈ ಸಂದರ್ಭ ಅವರಿಗೆ ತಿಳಿ ಹೇಳಲಾಯಿತು. ಹೆಚ್ಚಿನ ಜನರು ಪ್ಲಾಸ್ಟಿಕ್‌ನ್ನು ತಯಾರಿಸುವ ಕಂಪನಿಗಳನ್ನು ಮೊದಲು ಮುಚ್ಚುವಂತೆ ಮಾಡಬೇಕೆಂದು ಹೇಳಿದ್ದಾರೆ. ಈ ಸಂದರ್ಭ ಅವರಿಗೆ ನಾವು ಪ್ಲಾಸ್ಟಿಕ್ ಬಳಕೆ ಮಾಡದೆ ಅಂಗಡಿಗಳಲ್ಲಿ ಖರೀದಿಸದಿದ್ದರೆ ತಾನಾಗಿಯೆ ಕಂಪನಿಗಳು ಮುಚ್ಚುತ್ತವೆ ಎಂದು ಮನವೊಲಿಸಲಾಯಿತು. ಈ ಸಂದರ್ಭದಲ್ಲಿ ಪರಿಸರ ಅಭಿಯಂತರೆ ಶಿಲ್ಪಾ ಉಪಸ್ಥಿತರಿದ್ದರು.
Kshetra Samachara
13/08/2022 01:20 pm