ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆಯಲ್ಲಿ ಮುಗಿಯದ ಟ್ರಾಫಿಕ್, ವಾಹನಗಳ ಮತ್ತು ಪಾದಾಚಾರಿಗಳ ಸಂಚಾರಕ್ಕೆ ಸಮಸ್ಯೆ

ಮೂಡುಬಿದಿರೆ : ಮೂಡುಬಿದಿರೆ ಪೇಟೆಯಲ್ಲಿ ವಾಹನಗಳ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಏಕಮುಖ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿವೆ. ಮಸೀದಿ ರಸ್ತೆ, ಇರುವೈಲ್ ರಸ್ತೆ, ನಾಗರಕಟ್ಟೆ ರಸ್ತೆ, ಆಳ್ವಾಸ್ ರಸ್ತೆ ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ಇಟ್ಟು ಹೋಗುವುದರಿಂದ ಇತರ ವಾಹನಗಳ ಸಂಚಾರ ಮತ್ತು ಪಾದಾಚಾರಿಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲವೇಕೆ ಎಂದು ಪುರಸಭಾ ಸದಸ್ಯರು ಪೊಲೀಸ್ ಅಧಿಕಾರಿಗಳನ್ನು ಪ್ರಶ್ನಿಸಿದ ಘಟನೆ ಪುರಸಭಾ ವಿಶೇಷ ಸಭೆಯಲ್ಲಿ ನಡೆಯಿತು.

ಕಲ್ಲಬೆಟ್ಟು ಶಾಲಾ ಬಳಿಯಲ್ಲಿ ಕಳೆದ ಮೂರು ತಿಂಗಳ ಹಿಂದೆ ಕೆಲವು ಅಪಘಾತಗಳು ನಡೆದಿರುವುದರಿಂದ ಮುಂಜಾಗೃತ ಕ್ರಮವಾಗಿ ರಸ್ತೆಗೆ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ಇದರಿಂದಾಗಿ ಅಪಘಾತಗಳು ಕಡಿಮೆಯಾಗಿತ್ತು. ಆದರೆ ಇದೀಗ ಯಾರೋ ಕಿಡಿಕೇಡಿಗಳು ರಾತ್ರಿ ವೇಳೆಗೆ ಬ್ಯಾರಿಕೇಡನ್ನು ತೆಗೆದು ಹಾಕುತ್ತಿದ್ದಾರೆ ಈ ಬಗ್ಗೆ ಗಮನ ಹರಿಸುವಂತೆ ಪೊಲೀಸ್ ಅಧಿಕಾರಿಯನ್ನು ಉಪಾಧ್ಯಕ್ಷೆ ಸುಜಾತ ಶಶಿಧರ್ ಆಗ್ರಹಿಸಿದರು.

ಜಿಲ್ಲೆಯ ಬೇರೆ ಬೇರೆ ಕಡೆ ಅಹಿತಕರ ಘಟನೆಗಳು ನಡೆಯುತ್ತಿವೆ. ಮೂಡುಬಿದಿರೆ ಬೆಳೆಯುತ್ತಿರುವ ನಗರವಾಗಿರುವುದರಿಂದ ಇಲ್ಲಿ ಯಾವುದೇ ಅಶಾಂತಿಯ ಕೃತ್ಯಗಳು ನಡೆಯದಂತೆ ಗುಪ್ತಚರ ಇಲಾಖೆಗಳು ನಿಗಾ ವಹಿಸಬೇಕು. ಮೂಡುಬಿದಿರೆ ಕಡಲಕೆರೆ ಪರಿಸರದಲ್ಲಿ ಹಾಗೂ ಸ್ವರಾಜ್ಯ ಮೈದಾನದ ಬಳಿ ಗಾಂಜಾ ವ್ಯಸನಿಗಳು ತಿರುಗಾಡುತ್ತಿದ್ದಾರೆ ಈ ಬಗ್ಗೆಯೂ ಪೊಲೀಸ್ ಇಲಾಖೆ ತನಿಖೆ ನಡೆಸಬೇಕೆಂದು ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ ಆಗ್ರಹಿಸಿದರು.

ಟ್ರಾಫಿಕ್ ಸಮಸ್ಯೆಯನ್ನು ಆಲಿಸಿದ ಪೊಲೀಸ್ ಉಪ ನಿರೀಕ್ಷಕ ದಿವಾಕರ ರೈ ಮಾತನಾಡಿ ಮೂಡುಬಿದಿರೆಯಲ್ಲಿ ಸರಿಯಾಗಿ ಪಾರ್ಕಿಂಗ್‌ಗೆ ಬೇಕಾಗಿರುವ ಜಾಗವಿಲ್ಲ. ಇಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ನಮ್ಮಿಂದ ಸಾಧ್ಯವಾದಷ್ಟು ನಾವು ಕ್ರಮಕೈಗೊಳ್ಳುತ್ತಿದ್ದೇವೆ.

ಮೂಡುಬಿದಿರೆ ಠಾಣೆಯಲ್ಲಿ ಸಿಬ್ಬಂದಿಗಳ ಕೊರತೆಯೂ ಇದೆ. ಅಲ್ಲದೆ ಪೊಲೀಸ್ ಅಧಿಕಾರಿಗಳನ್ನು ಜಿಲ್ಲೆಯ ಬೇರೆ ಬೇರೆ ಕಡೆಗೆ ಕರ್ತವ್ಯಕ್ಕೆ ಹಾಕುತ್ತಿರುವುದರಿಂದ ಇಲ್ಲಿ ಸ್ವಲ್ಪ ಏರುಪೇರಾಗುತ್ತಿದೆ. ಇರುವ ಸಿಬಂದಿಗಳನ್ನೇ ಬಳಸಿ ತೊಂದರೆಯಾಗದಂತೆ ಕರ್ತವ್ಯವನ್ನು ಮಾಡಿಸುತ್ತಿದ್ದೇವೆ . ಗಾಂಜಾ ವ್ಯಸನಿಗಳ ಬಗ್ಗೆಯೂ ನಿಗಾ ವಹಿಸುತ್ತಿದ್ದೇವೆ. ಅಲ್ಲದೆ ಗುಪ್ತಚರ ಇಲಾಖೆಯೂ ಗುಪ್ತವಾಗಿ ಕೆಲಸ ಮಾಡುತ್ತಿದೆ ಎಂದ ಅವರು ಪುರಸಭೆಯ ಸದಸ್ಯರು ಹಾಗೂ ಅಧಿಕಾರಿಗಳು ಪೊಲೀಸ್ ಇಲಾಖೆ ಮಾಡುವ ಕೆಲಸಗಳಿಗೆ ಸಹಕಾರ ನೀಡುವಂತೆ ವಿನಂತಿಸಿದರು.

ಮುಖ್ಯಾಧಿಕಾರಿ ಇಂದು ಎಂ. ಪರಿಸರ ಅಭಿಯಂತರೆ ಶಿಲ್ಪಾ, ಎಂಜಿನಿಯರ್ ಪದ್ಮನಾಭ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

Edited By : PublicNext Desk
Kshetra Samachara

Kshetra Samachara

09/08/2022 12:10 pm

Cinque Terre

1.88 K

Cinque Terre

0

ಸಂಬಂಧಿತ ಸುದ್ದಿ