ಕಾರ್ಕಳ: ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ನೆಲ್ಲಿಗುಡ್ಡೆ ಜನವಸತಿ ಪ್ರದೇಶದಲ್ಲಿನ ಕೈಗಾರಿಕಾ ಪ್ರಾಂಗಣದಲ್ಲಿ ಪರಿಸರಕ್ಕೆ ಮಾರಕವಾಗಿರುವ ಗೇರುಸಿಪ್ಪೆ ಎಣ್ಣೆ ಹಾಗೂ ಶೆಲ್‌ಕೇಕ್ ಘಟಕವನ್ನು ಯಾವುದೇ ಕಾರಣಕ್ಕೂ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ ಎಂದು ನೆಲ್ಲಿಗುಡ್ಡೆ ಪರಿಸರ ಉಳಿಸಿ ಸಮಿತಿ ಎಚ್ಚರಿಕೆ ನೀಡಿದೆ.
ಈ ಕುರಿತು ಸಮಿತಿಯ ಪ್ರಧಾನ ಕಾರ್ಯದರ್ಶಿ ಶೇಕ್ ಶಬೀರ್ ಬುಧವಾರ ಕಾರ್ಕಳದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಜಾನ್ಸ್ ಸಿಎನ್ಎಸ್ಎಲ್ ಹೆಸರಿನಲ್ಲಿ ಘಟಕ ಸ್ಥಾಪನೆಗೆ ಮುಂದಾಗಿದ್ದು, ಈ ಘಟಕ ಸ್ಥಾಪನೆಯಿಂದ ಅಪಾಯಕಾರಿ ರಾಸಾಯನಿಕ ಹೊಗೆ ಬಿಡುಗಡೆಯಾಗುತ್ತದೆ, ಇದರಿಂದ ಜನರ ಆರೋಗ್ಯಕ್ಕೆ ಅಪಾಯ ಎದುರಾಗಲಿದೆ. ಪ್ರಮುಖವಾಗಿ ಶ್ವಾಸಕೋಶ ಹಾಗೂ ಕ್ಯಾನ್ಸರ್‌ನಂತಹ ಖಾಯಿಲೆಗೆ ಕಾರಣವಾಗುತ್ತದೆ.ಉದಲ್ಲದೇ ಉದ್ದೇಶಿತ ಘಟಕವು ಜನವಸತಿ ಕೈಗಾರಿಕಾ ವಲಯದಲ್ಲಿ ಸ್ಥಾಪಿಸಲು ಅವಕಾಶವಿಲ್ಲ.ಈ ಕೈಗಾರಿಕಾ ಪ್ರಾಂಗಣಕ್ಕೆ ಹೊಂದಿಕೊÀಡು ಸುಮಾರು ೪೫೦ಕ್ಕೂ ಮಿಕ್ಕಿ ಬಡಕುಟುಂಬಗಳು ವಾಸಿಸುತ್ತಿವೆ,ಈ ಘಟಕದಿಂದ ಕಣ್ಣಳತೆ ದೂರದಲ್ಲಿ ಅಂಗನವಾಡಿ, ಮೊರಾರ್ಜಿ ವಸತಿ ಶಾಲೆ, ಪದವಿಪೂರ್ವ ಕಾಲೇಜು,ಶಿಲ್ಪಕಲಾ ಕೇಂದ್ರ,ಪ್ರಾರ್ಥನಾ ಮಂದಿರವಿದ್ದು ಕಾರ್ಖಾನೆಯಿಂದ ಬಿಡುಗಡೆಯಾಗುವ ರಾಸಾಯನಿಕ ಮಿಶ್ರಿತ ಹೊಗೆ ಪರಿಸರಕ್ಕೆ ಮಾರಕವಾಗಲಿದೆ ಎಂದರು.
ಇಂತಹ ಅಪಾಯಕಾರಿ ಘಟಕಗಳನ್ನು ಜನವಸತಿ ಪ್ರದೇಶಗಳಲ್ಲಿ ಸ್ಥಾಪಿಸಲು ಅನುಮತಿಯಿಲ್ಲದ ಹಿನ್ನಲೆಯಲ್ಲಿ ಹಲವೆಡೆ ಇಂತಹ ಘಟಕಗಳನ್ನು ಮುಚ್ಚಿರುವ ಉದಾಹರಣೆಗಳು ಇವೆ. ಈಗಾಗಲೇ ಈ ಘಟಕ ಸ್ಥಾಪನೆಯನ್ನು ವಿರೋಧಿಸಿ ನೆಲ್ಲಿಗುಡ್ಡೆ ಪರಿಸರ ಉಳಿಸಿ ಸಮಿತಿಯು ಮಿಯ್ಯಾರು ಗ್ರಾಮ ಪಂಚಾಯತ್, ಜಿಲ್ಲಾಧಿಕಾರಿಗಳು, ತಹಶೀಲ್ದಾರ್, ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಗೆ ಮನವಿ ನೀಡಲಾಗಿದೆ. ಗ್ರಾಮಸ್ಥರ ವಿರೋಧದ ನಡುವೆಯೂ ಈ ಘಟಕ ಸ್ಥಾಪನೆಗೆ ಮುಂದಾದರೆ ಯಾವುದೇ ಕಾರಣಕ್ಕೂ ಇದನ್ನು ಆರಂಭಿಸಲು ಬಿಡುವುದಿಲ್ಲ ಈ ಘಟಕದ ವಿರುದ್ಧ ಉಗ್ರ ಹೋರಾಟಕ್ಕೂ ಸಿದ್ಧ ಎಂದು ಶಬ್ಬಿರ್ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಉಪಾಧ್ಯಕ್ಷ ರಾಜೇಶ್ ಶೆಟ್ಟಿ, ಗೌರವಾಧ್ಯಕ್ಷ ಮಂಜುನಾಥ ನಾಯಕ್, ಜತೆ ಕಾರ್ಯದರ್ಶಿ ಗಣೇಶ್ ಕುಮಾರ್, ರಾಜೇಶ್ ದೇವಾಡಿಗ, ಸದಸ್ಯರಾದ ರಂಜಿತ್, ರವಿ ಹೆಗ್ಡೆ, ಪ್ರಕಾಶ್ ಪೂಜಾರಿ ಉಪಸ್ಥಿತರಿದ್ದರು.
Kshetra Samachara
03/08/2022 09:06 pm