ಮೂಡುಬಿದಿರೆ: ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ರಾಜ್ಯದ ಎಸ್‌ಎಸ್‌ಎಲ್‌ಸಿ ಪ್ರತಿಭಾನ್ವಿತ ಸ್ಕೌಟ್ಸ್-ಗೈಡ್ಸ್ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಮೂಡುಬಿದಿರೆಯ ಸ್ಕೌಟ್ಸ್ -ಗೈಡ್ಸ್ ಕನ್ನಡ ಭವನದಲ್ಲಿ ನಡೆಯಿತು.
ದ.ಕ ಜಿ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ``ಸ್ಕೌಟ್ಸ್ - ಗೈಡ್ಸ್ ಚಳುವಳಿಯು ಬದುಕಿಗೆ ಬೇಕಾದ ಶಿಸ್ತು, ನೈತಿಕ ಪ್ರಜ್ಞೆ ಹಾಗೂ ಪ್ರಾಮಾಣಿಕತೆಯನ್ನು ಕಲಿಸುತ್ತದೆ. ಸುದ್ದಿಗಾಗಿ ಕಾರ್ಯ ಮಾಡದೆ ಸಮಾಜಕ್ಕೆ ಸತ್ಪ್ರಜೆಗಳನ್ನು ಕೊಡುಗೆ ನೀಡುತ್ತಿದೆ.
ಸನ್ಮಾನವು ಜವಬ್ದಾರಿಗಳನ್ನು ಹೆಚ್ಚಿಸುವಂತೆ ಮಾಡುತ್ತದೆ. ಮೊದಲು ಪೋಷಕರನ್ನು ಆದರ್ಶವಾಗಿ ಸ್ವೀಕರಿಸಿ ವಿದ್ಯಾರ್ಥಿಗಳು ತಾವು ಸಾಧಿಸಿರುವ ಸಾಧನೆಯನ್ನು ಉಳಿಸಿಕೊಂಡು ಹೋಗುವುದು ನಿಜವಾದ ಸಾಧನೆ ಎಂದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ. ಜಿ. ಆರ್ ಸಿಂಧ್ಯ ಮಾತನಾಡಿ, ಸ್ಕೌಟ್ಸ್ - ಗೈಡ್ಸ್ ತರಬೇತಿಗೆ ಜಿಲ್ಲಾಡಳಿತವು ಮಂಗಳೂರಿನಲ್ಲಿ ಈ ಹಿಂದೆ ನಿಗದಿಪಡಿಸಿದ್ದ ಸ್ಥಳವನ್ನು ಶೀಘ್ರವೇ ನೀಡುವಂತೆ ಮನವಿ ಮಾಡಿಕೊಂಡರು. ಭಾಷಣದಿಂದ ಸಮಾಜದ ಪರಿವರ್ತನೆ ಸಾಧ್ಯವಿಲ್ಲ, ವಿದ್ಯಾರ್ಥಿಗಳು ಕಲಿತ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರಷ್ಟೇ ದೇಶಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯ ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಹಾಗೂ ಆಳ್ವಾಸ್ ಎಜುಕೇಶನ್ ಫೌಂಡೇಶನ್ (ರಿ.) ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ವಿದ್ಯಾರ್ಥಿಗಳು ದೇಶದ ಬಗ್ಗೆ ಗೌರವ, ಸ್ವದೇಶಿ ಚಿಂತನೆ, ಕ್ರೀಡಾ ಮನೋಭಾವ ಹಾಗೂ ಸಾಂಸ್ಕೃತಿಕ ಪ್ರಜ್ಞೆ ಮೈಗೂಡಿಸಿಕೊಂಡರೆ ಅಪ್ರತಿಮರಾಗಿ ಬೆಳೆಯಲು ಸಾಧ್ಯ. ಪೋಷಕರು ಸತ್ಪçಜೆಗಳನ್ನು ದೇಶಕ್ಕೆ ಕೊಡುಗೆ ನೀಡುವುದರೊಂದಿಗೆ ಉತ್ತಮ ಮನಸುಗಳನ್ನು ಕಟ್ಟುವತ್ತ ಪ್ರಯತ್ನ ಪಡಬೇಕು, ಮಕ್ಕಳಿಗೆ ವಿದ್ಯಾಭ್ಯಾಸದ ಸಾಧನೆಯ ಬಗ್ಗೆ ಹೆಮ್ಮೆ ಇರಲಿ ಆದರೆ ಭ್ರಮೆ ಬೇಡ ಎಂದರು.
ಕಾರ್ಯಕ್ರಮದಲ್ಲಿ 36 ಶೈಕ್ಷಣಿಕ ಜಿಲ್ಲೆಗಳಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ 625 ಅಂಕ ಗಳಿಸಿದ 19 ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಹಾಗೂ ೬೦೦ಕ್ಕಿಂತ ಅಧಿಕ ಅಂಕ ಪಡೆದ ೪೫೦ ವಿದ್ಯಾರ್ಥಿಗಳನ್ನು ಗುರುತಿಸಿ ಅಭಿನಂದಿಸಲಾಯಿತು.ಸಾಧಕ ವಿದ್ಯಾರ್ಥಿಗಳಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆಯಿಂದ ತಲಾ 3000 ರೂ. ಹಾಗೂ ಪ್ರಶಸ್ತಿ ಪತ್ರ, ಮೌಲ್ಯಾಧಾರಿತ ಪುಸ್ತಕ, ಸ್ಕಾರ್ಫ್ ಹಾಗೂ ಶಾಲಾ ಬ್ಯಾಗ್ ಬಹುಮಾನವಾಗಿ ನೀಡಲಾಯಿತು. ಭಾಗವಹಿಸಿದ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಪ್ರಯಾಣ ಭತ್ಯೆ ನೀಡಲಾಯಿತು. ಆಳ್ವಾಸ್ ಸಂಸ್ಥೆಯಿಂದ ತಲಾ ೨೦೦ರೂ ನಗದು ನೀಡಿ ಪ್ರೋತ್ಸಾಹಿಸಲಾಯಿತು.
ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶ್ರೀ ಬಿ., ರಾಜ್ಯ ಆಯುಕ್ತ ಸಿಎಸ್ ರೆಡ್ಡಿ, ರಾಜ್ಯ ಕಾರ್ಯದರ್ಶಿ ಗಂಗಪ್ಪ ಗೌಡ, ರಾಜ್ಯ ಸಂಘಟನಾ ಆಯುಕ್ತ ಪ್ರಭಾಕರ್ ಭಟ್, ಉಡುಪಿ ಜಿಲ್ಲಾ ಗೈಡ್ಸ್ ಆಯುಕ್ತೆ ಜ್ಯೋತಿ ಪೈ, ಖಾನ್ ಫೌಂಡೇಶನ್ ಅಧ್ಯಕ್ಷ ಕ್ರಿಸ್‌ಮೂರ್ತಿ ಇನ್ನಿತರರು ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಎಂ.ಜೆ ಕಜೆ ಸ್ವಾಗತಿಸಿ, ರಾಜ್ಯ ತರಬೇತಿ ಆಯುಕ್ತ ನಾಗೇಶ್ ವಂದಿಸಿ, ಸ್ಥಳೀಯ ಸಂಸ್ಥೆ ಸಹಕಾರ್ಯದರ್ಶಿ ನವೀನ್‌ಚಂದ್ರ ಅಂಬೂರಿ ನಿರೂಪಿಸಿದರು.
Kshetra Samachara
26/07/2022 01:13 pm