ಕಾರ್ಕಳ: ರಾಜ್ಯದಲ್ಲಿ ಹಲವಾರು ವರ್ಷಗಳಿಂದ ಲಕ್ಷಾಂತರ ಬಡ ಕುಟುಂಬಗಳು ಸರ್ಕಾರಿ ಜಮೀನಿನಲ್ಲಿ ಗುಡಿಸಲು ಕಟ್ಟಿ ವಾಸ್ತವ್ಯದ ಮನೆಗೆ ಹಕ್ಕುಪತ್ರ ಪಡೆಯುವುದಕ್ಕೆ ಡೀಮ್ಡ್ ಸಮಸ್ಯೆಯಿಂದ ತೊಡಕಾಗಿತ್ತು.
ಹಿಂದಿನ ಕಾಂಗ್ರೆಸ್ಸಿನ ನೆತೃತ್ವದ ಸರ್ಕಾರದ ತಪ್ಪು ನಿರ್ದಾರದಿಂದಾಗಿ ಈ ಡೀಮ್ಡ್ ಸಮಸ್ಯೆ ತಲೆದೋರಿದ್ದು ಸರಕಾರಿ ಜಾಗದಲ್ಲಿ ನೆಲೆಸಿ ಹಕ್ಕುಪತ್ರಕ್ಕಾಗಿ ಕಾಯುತ್ತಿದ್ದ ಬಡ ಕುಟುಂಬಗಳ ವಾಸ್ತವ್ಯದ ಮನೆಗಳಿಗೆ ವಿದ್ಯತ್ ಸಂಪರ್ಕ, ನೀರು ಸಂಪರ್ಕ ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯ ಕಲ್ಪಿಸುವುದು ಅಸಾಧ್ಯವಾಗಿತ್ತು.
ಈ ಗಂಭೀರ ಸಮಸ್ಯೆಯನ್ನು ಅರಿತು ಬಿಜೆಪಿ ಸರಕಾರ ಹಾಗೂ ಸಚಿವರಾದ ವಿ ಸುನಿಲ್ ಕುಮಾರ್‌ರವರ ನಿರಂತರ ಪರಿಶ್ರಮದ ಫಲವಾಗಿ ಡೀಮ್ಡ್ ಸಮಸ್ಯೆ ಇತ್ಯರ್ಥಪಡಿಸಿ ಕುಟುಂಬಗಳಿಗೆ ಹಕ್ಕುಪತ್ರ ನೀಡಿದ್ದಾರೆ.
ಆದರೆ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡರು ಬಡವರಿಗೆ ಹಕ್ಕುಪತ್ರ ನೀಡಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಹಕ್ಕುಪತ್ರ ನೀಡದಂತೆ ಕಂದಾಯ ಇಲಾಖಾ ಅಧಿಕಾರಿಗಳಿಗೆ ಬೆದರಿಕೆ ಹಾಕಿರುವ ಹಾಗೂ ಈ ಬಗ್ಗೆ ಪತ್ರಿಕಾಗೋಷ್ಠಿಯನ್ನು ನಡೆಸಿರುವುದು ಖಂಡನೀಯ.
ಕಾಂಗ್ರೆಸ್ ಮುಖಂಡರ ಈ ನಡೆಯನ್ನು ಕಾರ್ಕಳ ಮತ್ತು ಹೆಬ್ರಿ ತಾಲೂಕಿನ ಪಂಚಾಯತ್ ರಾಜ್ ಒಕ್ಕೂಟವು ಪಕ್ಷಾತೀತವಾಗಿ ಖಂಡಿಸುತ್ತದೆ. ನಾವು ಯಾರೂ ಕೂಡ ಬಡವರ ಹೊಟ್ಟೆಗೆ ಕಲ್ಲು ಹಾಕುವ ಕೆಲಸ ಮಾಡಬಾರದು. ಸಚಿವರ ಇಂತಹ ಪ್ರಾಮಾಣಿಕ ಜನಪರ ಕೆಲಸಕ್ಕೆ ಕೈ ಜೋಡಿಸಬೇಕೇ ಹೊರತು ಅಡ್ಡಿಪಡಿಸುವುದು ಯಾವುದೇ ಸಂಘಟನೆಗಳಿಗೆ ಶೋಭೆ ತರುವುದಿಲ್ಲ. ಬಡವರಿಗೆ ಹಕ್ಕುಪತ್ರ ನೀಡುವ ಸಚಿವರ ಪ್ರಯತ್ನಕ್ಕೆ ಯಾರೇ ಅಡ್ಡಿಪಡಿಸಿದರೂ ಅವರಿಗೆ ಬಡವರ ಶಾಪ ತಟ್ಟದೆ ಇರದು ಎಂದು ಒಕ್ಕೂಟ ಹೇಳಿದೆ.
ಸಚಿವ ಸುನಿಲ್ ಕುಮಾರ್ ಇಡೀ ರಾಜ್ಯದ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದು, ಅಸಂಖ್ಯಾತ ಬಡವರಿಗೆ ನಿವೇಶನ ಮಂಜೂರಾತಿಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವರ ಈ ಕಾರ್ಯಕ್ರಮಕ್ಕೆ ಯಾರೂ ವಿನಾಕಾರಣ ಅಡ್ಡಿಪಡಿಸದೇ ಎಲ್ಲರೂ ಒಗ್ಗಟ್ಟಾಗಿ ಪಕ್ಷಾತೀತವಾಗಿ ಅವರೊಂದಿಗೆ ಕೈ ಜೋಡಿಸಬೇಕೆಂದು ಪಂಚಾಯತ್ ರಾಜ್ ಒಕ್ಕೂಟದ ಸಂಚಾಲಕರಾದ ಹಿರ್ಗಾನ ಪಂಚಾಯತಿ ಅಧ್ಯಕ್ಷ ಸಂತೋಷ್ ಶೆಟ್ಟಿ, ಮುಡಾರು ಪಂಚಾಯತಿ ಉಪಾಧ್ಯಕ್ಷೆ ಅಮೃತಾ ಪ್ರಭು ಹಾಗೂ ಕಡ್ತಲ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಪೂಜಾರಿ ಎಳ್ಳಾರೆ ಮನವಿ ಮನವಿ ಮಾಡಿದ್ದಾರೆ.
Kshetra Samachara
21/07/2022 05:54 pm