ಕುಂದಾಪುರ: ತಾಲೂಕಿನ ಕೈಲ್ಕೆರೆ, ಗುಡ್ಡೆಟ್ಟು, ಹಾರ್ಯಾಡಿ ಮತ್ತು ಕೊಳನ್ಕಲ್ಲು ಪ್ರದೇಶದಲ್ಲಿ ಒಟ್ಟು 5 ಶಾಸನೋಕ್ತ ಉಭಯಮುಖಿ ದಾನ ಶಿಲೆಗಳನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಹಾಗೂ ರಾಜೇಶ್ವರ ಉಪಾಧ್ಯಾಯ ಕಂಚಾರ್ತಿ ಅವರು ಪತ್ತೆ ಮಾಡಿರುತ್ತಾರೆ. ಕರ್ನಾಟಕದಲ್ಲಿಯೇ ಇಂತಹ ಉಭಯಮುಖಿ ದಾನ ಶಿಲೆಗಳು ಪತ್ತೆಯಾಗಿರುವುದು ಅಪರೂಪವಾಗಿದೆ. ಪತ್ತೆ ಮಾಡಿದಂತಹ ಎಲ್ಲಾ ದಾನ ಶಿಲೆಗಳಲ್ಲೂ ಶಾಸನಗಳಿದ್ದು ತೃಟಿತಗೊಂಡಿದೆ. ಗೋಚರಿಸುವ ಕೆಲವು ಲಿಪಿಯ ಆಧಾರದ ಮೇಲೆ ಇವುಗಳು 14ನೇ ಶತಮಾನಕ್ಕೆ ಸೇರಿದೆ ಎಂದು ಹೇಳಬಹುದು.
ಗೋದಾನಗಳಲ್ಲಿಯೇ ಶ್ರೇಷ್ಠ ದಾನವಾಗಿರುವ ಉಭಯಮುಖಿ ದಾನ (ಗರ್ಭಧಾರಣೆಯಾಗಿರುವ ಹಸುವನ್ನು ಅಥವಾ ಹಸುವಿನ ಹಾಲುಣ್ಣುತ್ತಿರುವ ಕರುವನ್ನು ದಾನ ಮಾಡುವುದು)ವನ್ನು ದೇವಾಲಯ ಅಥವಾ ಬ್ರಾಹ್ಮಣರಿಗೆ ನೀಡಲಾಗುತ್ತಿತ್ತು.
ಗುಡ್ಡೆಟ್ಟು ಶ್ರೀ ವಿಷ್ಣುಮೂರ್ತಿ ದೇವಾಲಯದಲ್ಲಿ ಪತ್ತೆಮಾಡಿದ ಉಭಯಮುಖಿ ದಾನ ಶಿಲೆಯ ಮೇಲ್ಭಾಗದಲ್ಲಿ ಪೀಠದ ಮೇಲೆ ಪದ್ಮಾಸನದಲ್ಲಿ ಕುಳಿತಿರುವ ಚತುರ್ಭುಜಧಾರಿ ವಿಷ್ಣು ಹಾಗೂ ಇಕ್ಕೆಲದಲ್ಲಿ ಕಾಲುದೀಪ ಹಾಗೂ ಕುಳಿತಿರುವ ಗರುಡನ ಕೆತ್ತನೆಯಿದೆ. ಕೆಳಗಿನ ಪಟ್ಟಿಕೆಯಲ್ಲಿ ದನ, ಹಾಲುಣ್ಣುತ್ತಿರುವ ಕರು ಹಾಗೂ ದಾನವನ್ನು ಸ್ವೀಕರಿಸುವ ಅಥವಾ ಕೊಡುತ್ತಿರುವ ವ್ಯಕ್ತಿಯ ಉಬ್ಬು ಶಿಲ್ಪವಿದೆ.
ಉಳಿದಂತೆ ಕಂಚಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಬಳಿ, ಕೊಳನ್ಕಲ್ಲು ಶ್ರೀ ಮಹಾಗಣಪತಿ ದೇವಾಲಯ ಸಮೀಪದ ಗದ್ದೆಯ ಬಳಿ, ಹಾರ್ಯಾಡಿ ಪುರಾಣಿಕರ ಮನೆಯ ಬಳಿ ಪತ್ತೆ ಮಾಡಲಾದ ದಾನ ಶಿಲೆಯ ಕೆಳಗಿನ ಪಟ್ಟಿಕೆಯು ಗುಡ್ಡೆಟ್ಟು ದೇವಾಲಯದ ಬಳಿಯಿರುವ ಪಟ್ಟಿಕೆಯ ರೀತಿಯಲ್ಲಿಯೇ ಇದ್ದು ಮೇಲ್ಭಾಗದಲ್ಲಿ ಮಾತ್ರ ಶಿವಲಿಂಗ ಹಾಗೂ ಇಕ್ಕೆಲಗಳಲ್ಲಿ ಕಾಲುದೀಪಗಳ ಕೆತ್ತನೆಯಿದೆ.
ಇತರೆಡೆ ಪತ್ತೆಯಾದ ಕೆಲವು ಶಾಸನಗಳ ಶಾಪಾಶಯದಲ್ಲಿ *ಉಭಯಮುಖಿಂ ಕೊಂದ ಪಾಪಂಮಕ್ಕುಂ* ಎಂದು ಉಲ್ಲೇಖಿಸಲಾಗಿದೆ. ಹಾಗಾಗಿ ಪತ್ತೆಯಾದ ಅಪರೂಪದ ಈ ಉಭಯಮುಖಿ ದಾನ ಶಿಲೆಗಳು ಅಧ್ಯಯನ ದೃಷ್ಟಿಯಿಂದ ಇತಿಹಾಸಕ್ಕೆ ಹೊಸ ಬೆಳಕನ್ನು ಚೆಲ್ಲಿದೆ ಎಂದು ಸಂಶೋಧನಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕ್ಷೇತ್ರಕಾರ್ಯ ಶೋಧನೆಯ ಸಂದರ್ಭದಲ್ಲಿ ಬಾಲಚಂದ್ರ ಅಡಿಗ ಗುಡ್ಡೆಟ್ಟು ಅವರು ಸಹಕಾರ ನೀಡಿರುತ್ತಾರೆ.
Kshetra Samachara
12/08/2021 06:05 pm