ತುಳುನಾಡಿನಲ್ಲಿ ನಡೆಯುವ ಏಳು ಪ್ರಸಿದ್ಧ ಜಾತ್ರೆಗಳಲ್ಲಿ ಕಾಪುವಿನ ಮಾರಿಪೂಜೆಯೂ ಒಂದಾಗಿದ್ದು ಕಾಪು ಶ್ರೀ ಹಳೆ ಮಾರಿಯಮ್ಮ ದೇವಸ್ಥಾನ, ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಮತ್ತು ಕಾಪು ಶ್ರೀ ಮೂರನೇ (ಕಲ್ಯ) ಮಾರಿಯಮ್ಮ ದೇವಸ್ಥಾನದಲ್ಲಿ ಮಂಗಳವಾರ ಮತ್ತು ಬುಧವಾರದಂದು ಕಾಲಾವಧಿ ಆಟಿ ಮಾರಿಪೂಜೆ ನಡೆಯಿತು.
ಮಂಗಳವಾರ ಸಂಜೆ ಪ್ರಾರಂಭಗೊಂಡು ಬುಧವಾರ ಸಂಜೆಯವರೆಗೆ ಎರಡು ದಿನಗಳ ಕಾಲ ಜರುಗುವ ಮಾರಿಪೂಜೆಯ ಸಂದರ್ಭದಲ್ಲಿ ವಿವಿಧೆಡೆಗಳಿಂದ ಬರುವ ಭಕ್ತಾಧಿಗಳು ಮೂರೂ ಮಾರಿಗುಡಿಗಳಿಗೂ ತೆರಳಿ ಮಾರಿಯಮ್ಮ ದೇವಿಗೆ ವಿವಿಧ ಹರಕೆ - ಕಾಣಿಕೆ - ಸೇವೆಗಳನ್ನು ಸಮರ್ಪಿಸುತ್ತಾರೆ. ಭಕ್ತರು ದೇವಿಯ ಗಣಗಳಿಗೆ ಸ್ವಯಂ ಪ್ರೇರಣೆಯಿಂದ ರಕ್ತಾಹಾರ ರೂಪದ ಸೇವೆಯನ್ನು ಸಮರ್ಪಿಸುವ ಮೂಲಕ ತಮ್ಮ ನಂಬಿಕೆಯನ್ನು ಅನಾವರಣಗೊಳಿಸುತ್ತಾರೆ.
ಬುಧವಾರ ಸಂಜೆ ಮೂರು ಮಾರಿಗುಡಿಗಳಲ್ಲಿಯೂ ಮಾರಿಯಮ್ಮ ದೇವಿಯ ದರ್ಶನ ಸೇವೆ ನಡೆದು, ದರ್ಶನಾವೇಷದೊಂದಿಗೆ ಮಾರಿಯಮ್ಮ ದೇವಿಯನ್ನು ಗದ್ದುಗೆಯಿಂದ ಕೆಳಗಿಳಿಸಲಾಗುತ್ತದೆ. ಗದ್ದುಗೆಯಿಂದ ಕೆಳಗಿಳಿಸಿದ ಬಿಂಬವನ್ನು ಮಲ್ಲಾರಿನ ನಿರ್ದಿಷ್ಟ ಪ್ರದೇಶಕ್ಕೆ ಕೊಂಡೊಯ್ದು ವಿಸರ್ಜಿಸುವ ಮೂಲಕ ಕಾಲಾವಧಿ ಸುಗ್ಗಿ ಮಾರಿ ಪೂಜಾ ಮಹೋತ್ಸವಕ್ಕೆ ತೆರೆ ಎಳೆಯಲಾಗುತ್ತದೆ.
Kshetra Samachara
27/07/2022 05:22 pm