ಸುಳ್ಯ: ಇತ್ತೀಚಿನ ವರ್ಷಗಳಲ್ಲಿ ಕಾಡು ಕೋಣಗಳ ಕಾರು ಬಾರು ನಾಡಿನಲ್ಲಿ ಅಧಿಕವಾಗಿದ್ದು ಮನೆಯಂಗಳಕ್ಕೂ ಕಾಡು ಕೋಣಗಳು ಲಗ್ಗೆಯಿಡುತ್ತಿವೆ.
ಜಾಲ್ಸೂರು ಗ್ರಾಮದ ಬೊಳು ಬೈಲು ಸಮೀಪದ ಕಾಟೂರು ಭಾಗದಲ್ಲಿ ಕಾಡುಕೋಣಗಳ ಉಪಟಳ ಅಧಿಕವಾಗಿದೆ. ಬೆಳಿಗ್ಗೆ ಎದ್ದು ಅಂಗಳಕ್ಕೆ, ಅಡಿಕೆ ತೋಟಕ್ಕೆ, ರಬ್ಬರ್ ತೋಟಕ್ಕೆ ಇಳಿಯುತ್ತಿದ್ದಂತೆ ಕಾಡು ಕೋಣಗಳು ಪ್ರತ್ಯಕ್ಷವಾಗುತ್ತದೆ. ಮನೆಯಲ್ಲಿ ಸಾಕಿದ ಜಾನುವಾರುಗಳಂತೆ ನಿರ್ಭಯವಾಗಿ, ಆರಾಮವಾಗಿ ಸುತ್ತಾಡಿ ಹುಲ್ಲು ಮೇಯುತ್ತಾ ಇರುತ್ತವೆ. ಸ್ಥಳೀಯವಾಗಿ ಇವುಗಳನ್ನು 'ಕಾಟಿಗಳು' ಎಂದು ಕರೆಯಲಾಗುತ್ತದೆ.
ಕೆಲವೊಮ್ಮೆ ಒಂದು, ಎರಡು ಕಾಣಿಸಿ ಕೊಂಡರೆ, ಸುಳ್ಯ ಬೊಳುಬೈಲು ಸಮೀಪ ಕಾಟೂರು ಭಾಗದಲ್ಲಿ ಕಂಡು ಬಂದ ಕಾಡು ಕೋಣ ಕೆಲವೊಮ್ಮೆ ಹಿಂಡು ಹಿಂಡಾಗಿ ಕಾಣಿಸಿ ಕೊಳ್ಳುತ್ತವೆ. ಕಾಟೂರು ಭಾಗದಲ್ಲಿ ಹಲವು ವರ್ಷಗಳಿಂದ ಕಾಡು ಕೋಣಗಳ ಉಪಟಳ ಕಂಡು ಬರುತಿದೆ ಎಂದು ಕೃಷಿಕರು ಹೇಳುತ್ತಾರೆ. ಕಾಡಿನಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದ ಕಾಡುಕೋಣಗಳ ಕಾರು ಬಾರು ಈಗ ನಾಡಿನಲ್ಲಿಯೂ ಅಧಿಕವಾಗುತಿದೆ. ಸುಳ್ಯ ತಾಲೂಕಿನಲ್ಲಿ ವಿವಿಧ ಭಾಗಗಳಲ್ಲಿ ಕಾಡುಕೋಣಗಳ ಉಪಟಳ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿದೆ. ಆನೆ, ಮಂಗ, ಕಾಡು ಹಂದಿ ಹೀಗೆ ಹಲವು ಕಾಡು ಪ್ರಾಣಿಗಳ ಹಾವಳಿಯಿಂದ ಬಸವಳಿದ ಕೃಷಿಕರಿಗೆ ಕಾಡುಕೋಣವೂ ಸಣ್ಣ ಮಟ್ಟಿನ ತಲೆ ನೋವನ್ನು ನೀಡುತಿದೆ. ಸುಳ್ಯ ತಾಲೂಕಿನ ಕಾಡಂಚಿನಲ್ಲಿರುವ ವಿವಿಧ ಗ್ರಾಮಗಳಲ್ಲಿ ಕಾಡು ಕೋಣಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾದರೂ ಪೂಮಲೆ ತಪ್ಪಲಿನಲ್ಲಿರುವ ಉಬರಡ್ಕ ಮಿತ್ತೂರು, ಸುಳ್ಯ ನಗರ ಸಮೀಪದಲ್ಲೇ ಇರುವ ಕಾಯರ್ತೋಡಿ, ಕಾಟೂರು ಪ್ರದೇಶಗಳಲ್ಲಿ ಈಗ ಕಾಡು ಕೋಣಗಳು ಆಗಾಗ್ಗೆ ಕಾಣಿಸಿಕೊಳ್ಳುತ್ತವೆ. ಪಂಜ, ಹರಿಹರ, ಬಾಳುಗೋಡು, ಮರ್ಕಂಜ, ಕಲ್ಮಕಾರು, ಕನಕಮಜಲು, ಬೇಂಗಮಲೆ ಹೀಗೆ ತಾಲೂಕಿನ ಹಲವು ಭಾಗಗಳಲ್ಲಿ ಕಾಡು ಕೋಣಗಳು ಆಗಿಂದಾಗ ಕಾಣಿಸಿಕೊಳ್ಳುತ್ತದೆ. ಕಾಡಿನಿಂದ ಆಹಾರ ಅರಸಿ ಇವು ನಾಡಿನೆಡೆಗೆ ದಾಂಗುಡಿಯಿಡುತ್ತವೆ.
Kshetra Samachara
07/10/2022 10:50 pm