ವರದಿ : ರಹೀಂ ಉಜಿರೆ
ಉಡುಪಿ : ಮಳೆಯ ಕ್ಷೀಣಗೊಂಡಿರುವ ಹಿನ್ನೆಲೆಯಲ್ಲಿ ಈ ಋತುವಿನ ಸೈಂಟ್‌ಮೇರೀಸ್ ದ್ವೀಪ ಯಾನ ಇನ್ನೊಂದೇ ದಿನದಲ್ಲಿ ಪ್ರಾರಂಭಗೊಳ್ಳಲಿದೆ.
ಸೆ.26 ಕ್ಕೆ ಈ ಪ್ರಸಿದ್ಧ ದ್ವೀಪ ಪ್ರವಾಸಿಗರಿಗೆ ತೆರೆದುಕೊಳ್ಳಲಿದೆ. ನಿರೀಕ್ಷೆಯೊಂದಿಗೆ ಮಲ್ಪೆಗೆ ಆಗಮಿಸುವ ಪ್ರವಾಸಿಗರು ಇನ್ನೊಂದು ದಿನ ಮಾತ್ರ ಕಾಯಬೇಕಾಗಿದೆ.
ಹಾಗೇ ನೋಡಿದರೆ ಉಡುಪಿಗೆ ಬರುವ ಭಕ್ತರು ಮತ್ತು ಪ್ರವಾಸಿಗರು ಈ ಸುಂದರ ದ್ವೀಪಕ್ಕೆ ಭೇಟಿ ನೀಡದೇ ಹೋಗುವುದು ಕಡಿಮೆಯೇ. ಪ್ರಕೃತಿ ಸೌಂರ್ಯದ ಜೊತೆಗೆ ಸುಂದರ ಅರಬ್ಬೀ ಸಮುದ್ರ ಯಾರಿಗಿಷ್ಟ ಇಲ್ಲ ಹೇಳಿ. ಇನ್ನೇನು ಮಕ್ಕಳಿಗೂ ದಸರಾ ರಜೆ ಪ್ರಾರಂಭಗೊಳ್ಳಲಿದೆ.ಈ ಹಿನ್ನೆಲೆಯಲ್ಲಿ ದ್ವೀಪಕ್ಕೆ ತೆರಳಲು ಬೋಟ್ ಗಳು ಸಜ್ಜುಗೊಳ್ಳುತ್ತಿವೆ.
ಈಗಾಗಲೇ ವಾರಾಂತ್ಯದಲ್ಲಿ ಮಲ್ಪೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದು, ಕೆಲವರು ಸೀವಾಕ್‌ನಲ್ಲಿ ಸುತ್ತಾಡಿ ತೃಪ್ತಿ ಪಡೆಯುತ್ತಿದ್ದರೆ ಮತ್ತೆ ಕೆಲವರು ಬೀಚ್ ಕಡೆ ಬರುತ್ತಿದ್ದಾರೆ. ದ್ವೀಪ ನೋಡಲು ಕೇರಳದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು ದ್ವೀಪಕ್ಕೆ ಕರೆದೊಯ್ಯುವ ಬೋಟ್‌ಗಳ ಸಂಚಾರ 26ಕ್ಕೆ ಅಧಿಕೃತವಾಗಿ ಪ್ರಾರಂಭಗೊಳ್ಳಲಿದೆ.
ಮಳೆಗಾಲದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತವು ಸಾಮಾನ್ಯವಾಗಿ ಮೇ 15ರಿಂದ ಸೆ.15ರ ವರೆಗೆ ಪ್ರವಾಸಿ ಬೋಟುಗಳಿಗೆ ಮತ್ತು ಬೀಚ್‌ನಲ್ಲಿ ನಡೆಯುವ ಜಲಕ್ರೀಡೆಗಳಿಗೆ ನಿರ್ಬಂಧ ಹೇರುತ್ತದೆ. ಸೆ.16ರಿಂದ ಎಲ್ಲವೂ ಮುಕ್ತವಾಗಿರುತ್ತವೆ. ಆದರೆ ಈ ಬಾರಿ ಸಮುದ್ರ ಪ್ರಕ್ಷುಬ್ಧತೆ ಕಡಿಮೆಯಾಗದಿರುವ ಹಿನ್ನೆಲೆಯಲ್ಲಿ ಯಾವುದಕ್ಕೂ ಅನುಮತಿ ಲಭಿಸಿರಲಿಲ್ಲ.
PublicNext
24/09/2022 09:46 pm