ಸುಳ್ಯ: ದಿಢೀರ್ ಪ್ರವಾಹ ಉಂಟಾಗಿ ಪಯಸ್ವಿನಿ ನದಿ ಉಕ್ಕಿ ಹರಿದು ಹಲವೆಡೆ ನೀರು ನುಗ್ಗಿ ಆವಾಂತರ ಸೃಷ್ಟಿಯಾದ ಘಟನೆ ನಡೆದಿದೆ. ಇಂದು ಬೆಳಿಗ್ಗಿನ ಜಾವ ಹಲವು ಕಡೆಗಳಲ್ಲಿ ನದಿ ಬದಿಯ ಪ್ರದೇಶಗಳಿಗೆ ನೀರು ನುಗ್ಗಿದೆ.
ಕೊಯನಾಡು ಶಾಲೆ ಬಳಿಯ 5 ಮನೆಗಳು ಜಲಾವೃತವಾಗಿವೆ. ಬಳಿಕ ಈ ಮನೆಯವರನ್ನು ಸುರಕ್ಷಿತ ಸ್ಣಳಗಳಿಗೆ ಸ್ಥಳಾಂತರಿಸಲಾಯಿತು. ಭಾರೀ ಗಾತ್ರದ ಮರಗಳು ಪ್ರವಾಹ ನೀರಿನಲ್ಲಿ ಕೊಚ್ಚಿ ಬಂದು ಕೊಯನಾಡಿನ ಕಿಂಡಿ ಅಣೆಕಟ್ಟಿನಲ್ಲಿ ಅಡ್ಡಲಾಗಿ ನಿಂತಿದೆ. ಹಲವೆಡೆ ಕೃಷಿ, ತೋಟಗಳಿಗೆ ನೀರು ನುಗ್ಗಿದೆ. ಊರುಬೈಲು, ಚೆಂಬು ಭಾಗದಲ್ಲಿ ಸೇತುವೆಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
ಸಂಪಾಜೆ ಭಾಗದಲ್ಲಿ ಮಳೆ ಕಡಿಮೆ ಇದ್ದರೂ ಪ್ರವಾಹ ಬಂದು ನದಿ ಉಕ್ಕಿ ಹರಿದು ನೀರು ನುಗ್ಗಿದ ಕಾರಣ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಪಯಸ್ವಿನಿ ನದಿ ಪಾತ್ರದ ಗೂನಡ್ಕ, ಪೇರಡ್ಕ ಭಾಗದಲ್ಲಿಯೂ ನೀರು ನುಗ್ಗಿದೆ. ಪಯಸ್ವಿನಿ ಉದ್ಭವ ಭಾಗದಲ್ಲಿ ಭಾರೀ ಮಳೆಯಾಗಿರುವ ಅಥವಾ ಜಲಸ್ಫೋಟ ಸಂಭವಿಸಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಹೇಳಿದ್ದಾರೆ.
ರಾತ್ರಿ ಸಂಪಾಜೆ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗಿತ್ತು.30ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ.
ಇನ್ನು ಸಾಕು ಪ್ರಾಣಿಗಳು ಪ್ರವಾಹ ಪಾಲಾಗಿದೆ. ಕೊಯನಾಡು ಸೇತುವೆ ಬಳಿ ಸಿಲುಕಿಕೊಂಡ ನೂರಾರು ಮರ, ರೆಂಬೆ ಕೊಂಬೆಗಳು ಸಿಲುಕಿ ಕೊಂಡಿದೆ. ಈ ಮಳೆಗಾಲದಲ್ಲಿ ನಾಲ್ಕನೇ ಬಾರಿ ಕೊಯನಾಡಿನಲ್ಲಿ ಅಪಾಯದ ಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯರ ಮನೆಯೊಳಗೆ ಎಲ್ಲೆಲ್ಲೂ ನೀರು, ಕೆಸರು ತುಂಬಿದೆ. ಸದ್ಯ ಗ್ರಾಮಸ್ಥರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಸದ್ಯ ಮಡಿಕೇರಿ ತಹಶೀಲ್ದಾರ್ ಮಹೇಶ್ ನೇತೃತ್ವದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ.
Kshetra Samachara
29/08/2022 10:16 am