ಕಾರ್ಕಳ: ರಾಜ್ಯದ ಬೆಳಗಾವಿಯಲ್ಲಿ ಮಹಿಳೆಯ ಮೇಲೆ ಚಿರತೆ ದಾಳಿ ನಡೆಸಿರುವ ಬೆನ್ನಲ್ಲೇ ಇದೀಗ ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಕಾಡುಹೊಳೆ ಪರಿಸರದಲ್ಲಿ ಶನಿವಾರ ಮುಂಜಾನೆ ಎರಡು ಚಿರತೆಗಳು ಪ್ರತ್ಯಕ್ಷವಾಗಿದ್ದು ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.
ಕಾಡುಹೊಳೆ ಎಂಬಲ್ಲಿನ ಸ್ಮಶಾನದ ಬಳಿ ಶನಿವಾರ ಮುಂಜಾನೆ ೬.೩೦ರ ವೇಳೆಗೆ ಎರಡು ದೊಡ್ಡ ಗಾತ್ರದ ಚಿರತೆಗಳು ರಸ್ತೆದಾಟಿ ಕೋಟೆಬೈಲು ಅರಣ್ಯದ ಪ್ರದೇಶದೊಳಗೆ ನುಗ್ಗಿವೆ ಎಂದು ಪ್ರತ್ಯಕ್ಷದರ್ಶಿ ಅಜೆಕಾರಿನ ರಾಜೇಶ್ ಶೆಟ್ಟಿ ಕರಾವಳಿ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ. ಚಿರತೆಗಳ ಓಡಾಟದಿಂದ ಕಾಡುಹೊಳೆ ಪರಿಸರದ ಜನರು ಭಯದಲ್ಲಿ ಓಡಾಡುವಂತಾಗಿದ್ದು ಮಕ್ಕಳು ಹಾಗೂ ಸಾಕುಪ್ರಾಣಿಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಿದೆ. ಆಹಾರ ಅರಸಿ ನಾಡಿಗೆ ಬರುವ ಚಿರತೆಗಳು ಹೆಚ್ಚಾಗಿ ನಾಯಿ,ಬೆಕ್ಕು ,ಕೋಳಿಗಳನ್ನು ಬೇಟೆಯಾಡುತ್ತವೆ ಆದರೆ ಆಹಾರ ಸಿಗದಾಗ ಮಕ್ಕಳು ಹಾಗೂ ಮನುಷ್ಯರ ಮೇಲೆ ದಾಳಿ ನಡೆಸಿದ ಸಾಕಷ್ಟು ಘಟನೆಗಳು ನಡೆದಿದೆ.
ಚಿರತೆಗಳ ಸೆರೆಗೆ ತಕ್ಷಣವೇ ಅರಣ್ಯ ಇಲಾಖೆ ಮುಂದಾಗಬೇಕು: ಗ್ರಾಮಸ್ಥರ ಆಗ್ರಹ
ಕಾಡುಹೊಳೆ ಪರಿಸರದಲ್ಲಿ ಚಿರತೆಗಳ ಓಡಾಟದಿಂದ ಕಂಗೆಟ್ಟಿರುವ ಗ್ರಾಮಸ್ಥರು ತಕ್ಷಣವೇ ಅರಣ್ಯ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಚಿರತೆಗಳನ್ನು ಸೆರೆ ಹಿಡಿಯುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸಬೇಕೆಂದು ಆಗ್ರಹಿಸಿದ್ದಾರೆ. ಕಳೆದ ೨೦೧೧ರಲ್ಲಿ ಇದೇ ಪರಿಸರದಲ್ಲಿ ಚಿರತೆ ಪ್ರತ್ಯಕ್ಷವಾಗಿ ಜನರಲ್ಲಿ ಆತಂಕ ಎದುರಾಗಿತ್ತು.ಹಂದಿಗೆ ಇಟ್ಟಿದ್ದ ಉರುಳಿಗೆ ಸಿಕ್ಕಿಬಿದ್ದಿದ್ದ ಚಿರತೆ ಬಳಿಕ ತಪ್ಪಿಸಿಕೊಂಡು ಜನರ ಮೇಲೆ ದಾಳಿ ನಡೆಸಲು ಯತ್ನಿಸಿ ನಂತರ ಅರಣ್ಯ ಇಲಾಖೆಯವರು ಕಾರ್ಯಾಚರಣೆ ನಡೆಸುವಾಗ ಅರಣ್ಯ ಸಿಬ್ಬಂದಿ ಪೊನ್ನಪ್ಪ ಎಂಬವರ ಮೇಲೆ ದಾಳಿ ನಡೆಸಿತ್ತು ಆದರೂ ಧೃತಿಗೆಡದೇ ಅರಣ್ಯ ಇಲಾಖೆಯ ಸಿಬ್ಬಂದಿಗಳು ಚಿರತೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.
Kshetra Samachara
28/08/2022 01:21 pm