ಪಬ್ಲಿಕ್ ನೆಕ್ಸ್ಟ್ ವಿಶೇಷ ವರದಿ: ವಿಶ್ವನಾಥ ಪಂಜಿಮೊಗರು
ಮಂಗಳೂರು: ರಸ್ತೆ ಅಗಲೀಕರಣ, ಅಭಿವೃದ್ಧಿ ನೆಪದಲ್ಲಿ ಲಕ್ಷಾಂತರ ಮರಗಳು ಉರುಳುತ್ತಲೇ ಇವೆ. ಆದರೆ ನಗರದೊಳಗಡೆಯೇ ಕಾಡು ಬೆಳೆಸುವ 'ಅರ್ಬನ್ ಫಾರೆಸ್ಟ್' ಕಲ್ಪನೆಯೊಂದು ಹುಟ್ಟಿಕೊಂಡಿದೆ. ರಸ್ತೆ ಬದಿಗಳ ಸಣ್ಣ ಸಣ್ಣ ತುಣುಕು ಸ್ಥಳಗಳಲ್ಲಿ, ಕಾಂಕ್ರೀಟ್ ಕಟ್ಟಡಗಳ ಪುಟ್ಟ ಜಾಗಗಳಲ್ಲಿ ಜಪಾನಿ ಮಿಯಾವಾಕಿ ಪದ್ಧತಿಯಲ್ಲಿ ಅರಣ್ಯ ಬೆಳೆಸುವ ಮಹತ್ತರವಾದ ಪ್ರಯತ್ನವೊಂದು ಮಂಗಳೂರಿನಲ್ಲೂ ಸದ್ದಿಲ್ಲದೇ ಸಾಗುತ್ತಿದೆ.
ನಗರದ ಕೆಪಿಟಿ ಬಳಿಯಿರುವ ಪದುವ ಕಾಲೇಜಿನ ಬಳಿಯ ಎನ್ಎಚ್ 66ರ ಬದಿಯಲ್ಲಿಯೇ ಇರುವ 74 ಸೆಂಟ್ಸ್ ಜಾಗದಲ್ಲಿ ಬೃಹತ್ ಅರ್ಬನ್ ಫಾರೆಸ್ಟ್ ತಲೆಯೆತ್ತಲಿದೆ. ಮಂಗಳೂರಿನ ಪರಿಸರಾಸಕ್ತ ಜೀತ್ ಮಿಲನ್ ರೋಚ್ ಪ್ರಯತ್ನದಲ್ಲಿ 2,140 ವಿವಿಧ ಗಿಡ - ಮರಗಳು ಇಲ್ಲಿ ಬೆಳೆಯಲಿದೆ. ಇದರಲ್ಲಿ150 ಮರಗಳ ಪ್ರಭೇದಗಳು, 20 ವಿವಿಧ ಪ್ರಭೇದಗಳ ಹುಲ್ಲುಗಳು, ಬಳ್ಳಿಗಳು, ಕುರುಚಲು ಗಿಡಗಳು ಮುಂದಿನ ದಿನಗಳಲ್ಲಿ ಕಾಡಿನ ಪರಿಸರವನ್ನು ಸೃಷ್ಟಿಸಲಿದೆ. ಅಷ್ಟೇ ಅಲ್ಲದೆ ಪದುವಾ ಶಾಲೆಯ ಮುಂದಿರುವ ಈ ಪ್ರದೇಶ ಹಿಂದೆ ಡಂಪಿಂಗ್ ಯಾರ್ಡ್ ಆಗಿತ್ತು. ಸುಮಾರು 64 ಲೋಡ್ ಗಳಷ್ಟು ತ್ಯಾಜ್ಯವನ್ನು ತೆಗೆದು ಅಷ್ಟೇ ಉತ್ತಮ ಮಣ್ಣು ತುಂಬಿಸಿರುವ ಈ ಪ್ರದೇಶ ಜೀತ್ ಮಿಲನ್ ರೋಚ್ ಪ್ರಯತ್ನದಿಂದ ಬಹುದೊಡ್ಡ ಅರಣ್ಯ ವಲಯವಾಗಿ ಪರಿವರ್ತನೆ ಆಗಲಿದೆ. ಜೀತ್ ಅವರು ಬರೀ ಗಿಡಗಳನ್ನು ನೆಡುವುದು ಮಾತ್ರವಲ್ಲ, ಅವುಗಳ ಪೋಷಣೆಯನ್ನೂ ಅಷ್ಟೇ ಕಾಳಜಿಯಿಂದ ಮಾಡುವವರು.ಆದ್ದರಿಂದ ಈ ಗಿಡಗಳಿಗೆ ಅವರು ಅಪಾರ್ಟ್ ಮೆಂಟ್ ನಿಂದ ದೊರಕುವ ತ್ಯಾಜ್ಯಗಳಿಂದ ಗೊಬ್ಬರವನ್ನು ತಯಾರಿಸಿ ಬಳಸುತ್ತಿದ್ದಾರೆ.
ಜೀತ್ ಮಿಲನ್ ರೋಚ್ ಈ ಬಗ್ಗೆ ಮಾತನಾಡಿ, ಮಂಗಳೂರಿನಲ್ಲಿ ಹಸಿರು ವಲಯ ಕಡಿಮೆ ಆಗುತ್ತಿದೆ. ಉತ್ತಮ ರಸ್ತೆ ನೀಡಿ ಉತ್ತಮ ಗಾಳಿ ನೀಡದಿದ್ದರೆ ಏನು ಪ್ರಯೋಜನ. ಆದ್ದರಿಂದ ಇದೇ ರೀತಿಯ ಇನ್ನಷ್ಟು ನಗರ ಅರಣ್ಯಗಳು ನಿರ್ಮಾಣವಾಗಬೇಕು. ಸ್ಮಾರ್ಟ್ ಸಿಟಿ ಆಗುತ್ತಿರುವ ಮಂಗಳೂರು ಆರೋಗ್ಯ ನಗರವಾಗಬೇಕಾದರೆ 33% ಹಸಿರು ವಲಯ ನಿರ್ಮಾಣವಾಗಬೇಕು ಎಂದು ಹೇಳಿದರು.
PublicNext
13/08/2022 04:18 pm