ವರದಿ: ರಹೀಂ ಉಜಿರೆ
ಕುಂದಾಪುರ: ಸಮುದ್ರದ ಮೀನುಗಳು ವರ್ಷಪೂರ್ತಿ ಸಿಗುತ್ತವೆ. ಆದರೆ ಹೊಳೆಮೀನು ಇದಕ್ಕೆ ಭಿನ್ನ. ಇವು ಕೆಲವು ಸೀಸನ್‌ಗಳಲ್ಲಿ ಹೆಚ್ಚು. ಕೆಲವೊಮ್ಮೆ ಎಷ್ಟೇ ದುಡ್ಡು ಕೊಟ್ಟರೂ ಸಿಗದು. ಭಾರೀ ರುಚಿರುಚಿಯಾದ ಹೊಳೆಮೀನಿನ ಸ್ವಾದ, ಅದನ್ನು ಸವಿದವರಿಗಷ್ಟೇ ಗೊತ್ತು.
ನೀವು ನಂಬಲಿಕ್ಕಿಲ್ಲ, ರಾತ್ರಿ ಇಡೀ ಹೊಳೆಮೀನಿಗಾಗಿ ಗಾಳ ಹಾಕಿ ಕೂರುವವರಿದ್ದಾರೆ. ಈಗ ಮಳೆಗಾಲದಲ್ಲಿ ಈ ಹೊಳೆಮೀನು ಬೇಟೆ ಹೆಚ್ಚು. ಬೀಚ್‌ನಲ್ಲಿ ಹಲವು ಬಗೆಯ ನದಿ ಮೀನುಗಳು ತೀರ ಪ್ರದೇಶದತ್ತ ಧಾವಿಸಿ ಬರುತ್ತವೆ. ಅದರಲ್ಲೂ ಸಾವಿರಾರು ಸಂಖ್ಯೆಯಲ್ಲಿ ಬರುತ್ತಿರುವ 'ಮುರಿಯ' ತಳಿಯ ಮೀನಿಗಾಗಿ ತಟದ ನಿವಾಸಿಗಳು ಮುಗಿ ಬೀಳುತ್ತಿದ್ದಾರೆ. ಕತ್ತಲಾದರೆ ಸಾಕು, ಹುಡುಕಾಟ ಆರಂಭಿಸುತ್ತಾರೆ. ಕತ್ತಲಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೀನುಗಳು ತೀರ ಪ್ರದೇಶಕ್ಕೆ ಬರುತ್ತವೆ ಎಂಬ ನಂಬಿಕೆಯೇ ಇದಕ್ಕೆ ಕಾರಣ.
ಹೀಗೆ ಬಂದ ಮೀನುಗಳು ಸುಲಭವಾಗಿ ಮತ್ಸ್ಯಪ್ರಿಯರ ಪಾಲಾಗುತ್ತವೆ. ಮುರಿಯ ಮೀನಿಗಾಗಿ ಸಮುದ್ರ ತೀರದಲ್ಲಿ ಜನರು ಮುಗಿ ಬೀಳುವುದನ್ನು ಅಲ್ಲಲ್ಲಿ ಕಾಣಬಹುದು. ಮಳೆ ಬಂದಾಗ ಉಪ್ಪು ನೀರಿಗೆ ಹೊಳೆಯ ನೀರು ಹೋಗಿ ಮುರಿಯ ಮೀನುಗಳು ಅರೆ ಪ್ರಜ್ಞಾವಸ್ಥೆಗೆ ತಲುಪುತ್ತವೆ. ಸಮುದ್ರದ ದಡಕ್ಕೆ ಬಂದು ಬೀಳುತ್ತವೆ.
ಮರವಂತೆ, ಉಪ್ಪುಂದ, ಬೈಂದೂರು, ಶಿರೂರು, ಭಾಗಗಳಲ್ಲಿ ಸಮುದ್ರ ದಡದಲ್ಲಿ ಮುರಿಯ ಮೀನುಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಬೀಳುತ್ತಿವೆ. ಹೀಗೆ ಬಂದು ಬೀಳುವ ಮೀನುಗಳಿಗೆ ಬೆಳಿಗ್ಗೆಯಿಂದ ರಾತ್ರಿವರೆಗೂ ಜನರು ಕಾದು ಕುಳಿತುಕೊಳ್ಳುತ್ತಾರೆ. ಬೆಳಿಗ್ಗೆ ಭರ್ಜರಿ ಮೀನುಗಳನ್ನು ಮನೆಗೆ ಕೊಂಡೊಯ್ದು ಅಡುಗೆ ಮಾಡುತ್ತಾರೆ. ಜಿಲ್ಲೆಯ ಹಲವೆಡೆ ಮಳೆಗಾಲದಲ್ಲಿ ಕಂಡುಬರುತ್ತಿರುವ ಸಾಮಾನ್ಯ ದೃಶ್ಯ ಇದು.
Kshetra Samachara
11/08/2022 04:08 pm