ಸುಳ್ಯ: ಕೊಡಗು ಜಿಲ್ಲೆಯ ಮದೆನಾಡು ಬಳಿಯ ರಾಷ್ಟ್ರೀಯ ಹೆದ್ದಾರಿ 275 ರ ಬದಿಯಲ್ಲಿ ಗುಟ್ಟ ಕುಸಿಯುತ್ತಿರುವ ಪರಿಣಾಮ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಪಾಜೆ-ಮಡಿಕೇರಿ ರಸ್ತೆಯಲ್ಲಿ ಇಂದು ಮತ್ತು ನಾಳೆ(ಆ.10 ಮತ್ತು ಆ.11)ರಾತ್ರಿ 8.30 ರಿಂದ ಬೆಳಗ್ಗೆ 6.30 ಗಂಟೆಯವರೆಗೆ ಎಲ್ಲಾ ವಾಹನ ಸಂಚಾರ ನಿಷೇಧಿಸಿ ಕೊಡಗು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಮದೆನಾಡು ಬಳಿ ಗುಡ್ಡ ಕುಸಿತದ ಆತಂಕವಿದ್ದು ವಾಹನ ಪ್ರಯಾಣಿಕರಿಗೆ ಅಪಾಯ ಸಾಧ್ಯತೆ ಇರುವ ಕಾರಣದಿಂದ ರಸ್ತೆಯಲ್ಲಿ ರಾತ್ರಿ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ನಿನ್ನೆ ರಾತ್ರಿಯಿಂದ ಇಂದು ಬೆಳಗ್ಗಿನ ತನಕ ರಾತ್ರಿ ಸಂಚಾರ ನಿಷೇಧಿಸಲಾಗಿತ್ತು. ಮುಂದುವರಿದು ಇಂದು ಮತ್ತು ನಾಳೆ ರಾತ್ರಿ ಸಂಚಾರ ನಿಷೇಧಿಸಲಾಗಿದೆ.
ಹಗಲಿನ ವೇಳೆ ಎಂದಿನಂತೆ ವಾಹನ ಸಂಚಾರ ಮಾಡಬಹುದು. ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಡಿಕೇರಿ ಸಮೀಪದ ಮದೆನಾಡು ಗ್ರಾಮದ ಕರ್ತೋಜಿ ಎಂಬಲ್ಲಿ ಗುಡ್ಡ ಪ್ರದೇಶದಲ್ಲಿ ಭಾರೀ ಬಿರುಕುಗಳು ಕಾಣಿಸಿಕೊಂಡಿದ್ದು, ಮಣ್ಣು ಕುಸಿತದೊಂದಿಗೆ ಸಂಪರ್ಕ ಕಡಿತದ ಆತಂಕ ಎದುರಾಗಿದೆ.ರಸ್ತೆ ಪಕ್ಕದ ಗುಡ್ಡದಲ್ಲಿ ಭಾರೀ ಬಿರುಕು ಮೂಡಿದೆ. ಅಲ್ಪಸ್ವಲ್ಪ ಕುಸಿತವೂ ಸಂಭವಿಸಿದೆ. ಮಳೆಯ ಪ್ರಮಾಣ ಹೆಚ್ಚಿದಲ್ಲಿ ಯಾವುದೇ ಕ್ಷಣದಲ್ಲೂ ಮಣ್ಣು ಜರಿದು ಹೆದ್ದಾರಿಗೆ ಬೀಳುವ ಸಾಧ್ಯತೆಯಿದ್ದು, ಕುಸಿತವಾಗಿ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಕೊಡಗು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಸಂಚಾರ ನಿಷೇಧಿಸಿ ಆದೇಶ ನೀಡಿದ್ದಾರೆ.
Kshetra Samachara
10/08/2022 08:11 pm