ಉಪ್ಪಿನಂಗಡಿ: ಶಾಂತಗೊಂಡಿದ್ದ ನೇತ್ರಾವತಿ- ಕುಮಾರಧಾರ ನದಿಗಳು ಮತ್ತೆ ರೌದ್ರವತಾರ ತಾಳಿವೆ. ಭಾನುವಾರ ನಸುಕಿನ ಜಾವದಿಂದಲೇ ಉಭಯ ನದಿಗಳಲ್ಲಿ ನೀರ ಹರಿವು ಹೆಚ್ಚಾಗುತ್ತಿದ್ದು, ನದಿ ನೀರು ಅಪಾಯದ ಮಟ್ಟ ತಲುಪಿದೆ.
ಈಗಾಗಲೇ ನದಿ ಪಾತ್ರದ ಪ್ರದೇಶಗಳು ಜಲಾವೃತಗೊಂಡಿವೆ. ಉಭಯ ನದಿಗಳಲ್ಲಿ ನೀರು ಹೆಚ್ಚಳವಾಗುತ್ತಲೇ ಇದ್ದು 2019 ರ ಬಳಿಕ ಮತ್ತೊಮ್ಮೆ ಉಪ್ಪಿನಂಗಡಿಯಲ್ಲಿ ನೆರೆ ಬರುವ ಸಾಧ್ಯತೆ ಕಾಣಿಸಿಕೊಂಡಿದೆ.
ಕಳೆದ ಕೆಲವು ದಿನಗಳಲ್ಲಿ ನೆರೆ ಭೀತಿ ಮೂಡಿಸಿದ ನೇತ್ರಾವತಿ- ಕುಮಾರಧಾರ ನದಿಗಳು ಶನಿವಾರ ಶಾಂತಗೊಂಡಿದ್ದವು. ಉಭಯ ನದಿಗಳಲ್ಲಿ ನೀರ ಹರಿವು ತೀರಾ ಕಡಿಮೆಯಾಗಿತ್ತು. ಆದರೆ ಶನಿವಾರ ಸಂಜೆಯಾಗುತ್ತಲೇ ನೀರು ಏರಿಕೆಯಾಗುತ್ತಲೇ ಇದ್ದು, ಭಾನುವಾರ ನಸುಕಿನ ಜಾವ ಎರಡು ಗಂಟೆಯ ಬಳಿಕ ಅಪಾಯದ ಮಟ್ಟದಲ್ಲಿ ಉಭಯ ನದಿಗಳ ನೀರು ಹರಿಯುತ್ತಿದೆ.
ಇನ್ನು ಈ ನದಿಗಳು ಉಕ್ಕಿ ಹರಿದರೆ ರಥಬೀದಿ ಪಂಜಳ, ಹಿರ್ತಡ್ಕ -ಮಠ, ಹಳೆಗೇಟು, ಕೂಟೇಲು, ಕಡವಿನ ಬಾಗಿಲು, ದೇವಸ್ಥಾನ ಹೀಗೆ ನದಿ ಪಾತ್ರದ ಪ್ರದೇಶಗಳಲ್ಲದೆ, ನದಿಯನ್ನು ಸಂಪರ್ಕಿಸುವ ತೋಡುಗಳ ಬಳಿಯಿರುವ ಪ್ರದೇಶಗಳೂ ಸಂಪೂರ್ಣ ಜಲಾವೃತಗೊಳ್ಳುತ್ತವೆ.
ಉಭಯ ನದಿಗಳ ನೀರು ಇನ್ನಷ್ಟು ಹೆಚ್ಚಳಗೊಂಡು ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಎಡ ಹಾಗೂ ಬಲ ಬದಿಯಿಂದ ಬಂದು ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಅಂಗಣಕ್ಕೆ ಹೊಕ್ಕು ಅಲ್ಲಿನ ಧ್ವಜ ಸ್ತಂಭವನ್ನು ಸ್ಪರ್ಶಿಸಿದಾಗ ಪವಿತ್ರ ಸಂಗಮ ಘಟಿಸುತ್ತದೆ.
ಹೀಗೆ ನದಿಗಳಲ್ಲಿ ನೀರಿನ ಹರಿವು ಹೆಚ್ಚಳವಾಗುತ್ತಲೇ ಸಾಗಿದರೆ ಈ ಬಾರಿ ಪವಿತ್ರ ಸಂಗಮ ಘಟಿಸುವ ಸಾಧ್ಯತೆಯೂ ಇದೆ.
Kshetra Samachara
10/07/2022 04:45 pm