ವರದಿ : ದಾಮೋದರ ಮಗವೀರ ನಾಯಕವಾಡಿ
ಬೈಂದೂರು: ಉಡುಪಿ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸಮುದ್ರದ ರಕ್ಕಸ ಅಲೆಗಳ ಅಬ್ಬರ ಹೆಚ್ಚಾಗಿದೆ. ಕಡಲ ಕೊರೆತ ಹಾಗೂ ಸೌಪರ್ಣಿಕ ನದಿಯ ನೆರೆಯ ಹಾವಳಿ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮರವಂತೆ ಬೀಚ್ ನಲ್ಲಿ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಬಂದ ಪ್ರವಾಸಿಗರು ಸಖತ್ ಎಂಜಾಯ್ ಮಾಡುತ್ತಿದ್ದಾರೆ.
ಚಿಕ್ಕ ಚಿಕ್ಕ ಮಕ್ಕಳು ಹಾಗೂ ಮಹಿಳೆಯರೊಂದಿಗೆ ಬೀಚ್ ನಲ್ಲಿ ಮೋಜು ಮಸ್ತಿಯಲ್ಲಿ ಮೈಮರೆಯುತ್ತಿದ್ದಾರೆ. ಸದ್ಯ ಮಳೆಗಾಲ ಈ ಸಮಯದಲ್ಲಿ ಸಾಕಷ್ಟು ಪ್ರಾಣ ಹಾನಿಯಾಗುವ ಸಾಧ್ಯತೆಗಳಿವೆ ನೆರೆ ಪ್ರದೇಶದಲ್ಲಿ ಮನೆ, ಕೃಷಿ ಭೂಮಿ ಹಾಗೂ ಜಾನುವಾರುಗಳಿಗೆ ಹಾನಿ ಉಂಟಾಗಿದೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಸ್ಥಳೀಯರು ಹಾಗೂ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಎಷ್ಟೇ ಕಟ್ಟು ನಿಟ್ಟಿನ ಕ್ರಮ ಕೈಗೊಂಡರೂ ಪ್ರವಾಸಿಗರು ಮಾತ್ರ ಕ್ಯಾರೇ ಎನ್ನುತ್ತಿಲ್ಲ.
ಮರವಂತೆ ಬೀಚ್ ಗೆ ಬರುವ ಪ್ರವಾಸಿಗರಿಗೆ ಸ್ಥಳೀಯರು ಅಪಾಯದ ಬಗ್ಗೆ ಬುದ್ಧಿಮಾತು ಹೇಳಿದ್ರೆ ಪರಿಸ್ಥಿತಿ ಅರಿಯದ ಪ್ರವಾಸಿಗರು ಸ್ಥಳೀಯರ ವಿರುದ್ಧ ಜಗಳಕ್ಕೆ ಮುಂದಾಗುತ್ತಿದ್ದಾರೆ.ನಾವು ಹಣ ಖರ್ಚು ಮಾಡಿಕೊಂಡು ಬಂದಿರುವುದು ಎಂಜಾಯ್ ಮಾಡಲಿಕ್ಕೆ, ನೀವು ಯಾರು ನಮ್ಮನ್ನು ಕೇಳಲಿಕ್ಕೆ ಎಂದು ಗದರಿಸುತ್ತಿದ್ದಾರೆ.
ಇನ್ನಾದರೂ ಪ್ರವಾಸೋದ್ಯಮ ಇಲಾಖೆ ಎಚ್ಚೆತ್ತುಕೊಂಡು ಅಪಾಯಕ್ಕೂ ಮುನ್ನ ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸಲಿ ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.
Kshetra Samachara
08/07/2022 10:14 am