ಮಂಗಳೂರು: ಮಳೆಗೆ ಸಂಪೂರ್ಣ ಮನೆ ಬಿದ್ದವರಿಗೆ 5 ಲಕ್ಷ ರೂ., ಅರ್ಧ ಮನೆ ಬಿದ್ದಲ್ಲಿ 3 ಲಕ್ಷ ರೂ. ಹಾಗೂ ಭಾಗಶಃ ಹಾನಿಗೊಳಗಾದವರಿಗೆ 50 ಸಾವಿರ ರೂ. ಪರಿಹಾರವನ್ನು ಎನ್ ಡಿಆರ್ ಎಫ್ ನಿಂದ ನೀಡಲಾಗುತ್ತದೆ ಎಂದು ರಾಜ್ಯ ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ನಗರದ ದ.ಕ. ಜಿಪಂನಲ್ಲಿ ಮಳೆ ಹಾನಿಯ ಬಗ್ಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮನೆಗಳು ಬಿರುಕು ಬಿಟ್ಟು ಫೌಂಡೇಶನ್ ಹಾನಿಯಾಗಿರುವ ಮನೆಗಳಿಗೂ ಪೂರ್ತಿ 5 ಲಕ್ಷ ರೂ. ಬಿಡುಗಡೆ ಮಾಡಲಾಗುತ್ತದೆ. ಈ ಪರಿಹಾರವನ್ನು ತಕ್ಷಣ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ ಮಳೆ ಹಾನಿಯಲ್ಲಿ ಪರಿಹಾರವನ್ನು ಸ್ವಲ್ಪ ಉದಾರವಾಗಿ ಲೆಕ್ಕಾಚಾರ ಹಾಕಿ, ಯಾವುದೇ ರೀತಿ ಕಂಜೂಸಿತನ ಬೇಡವೆಂದು ಹೇಳಿದರು.
ಮಳೆನೀರಿನಿಂದ ರಸ್ತೆ ಸಂಚಾರಕ್ಕೆ ತಡೆಯಾದಲ್ಲಿ ತಕ್ಷಣ ತೆರವು ಕಾರ್ಯಾಚರಣೆ ಕೈಗೊಳ್ಳಬೇಕು. ಅದಕ್ಕೆ ಬೇಕಾದ ಜೆಸಿಬಿ ಸೇರಿದಂತೆ ಅಗತ್ಯ ಉಪಕರಣ ಸನ್ನದ್ಧವಾಗಿರಿಸಿಕೊಳ್ಳಬೇಕು. ಅಗ್ನಿಶಾಮಕ ದಳಕ್ಕೆ ಪ್ರತಿ ತಾಲೂಕಿನಲ್ಲೂ ಪ್ರವಾಹ ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸಲು ಬೋಟ್, ಟಾರ್ಚ್, ಅಗತ್ಯ ಸಾಧನ ಖರೀದಿಸಲು ಅನುದಾನ ನೀಡಲಾಗುತ್ತದೆ. ಕಾಳಜಿ ಕೇಂದ್ರದಲ್ಲಿ ಶುಚಿ-ರುಚಿ ಊಟ, ಉಪಹಾರ ಸೌಲಭ್ಯ, ಹಾಸಿಗೆ , ಹೊದಿಕೆ ನೀಡಬೇಕು. ಜಿಲ್ಲೆಯಲ್ಲಿ ಮುಂದೆ ಕಡಲ್ಕೊರೆತ ಆಗದಂತೆ ಶಾಶ್ವತ ಪರಿಹಾರ ಕಾರ್ಯ ಬಗ್ಗೆ ಜಿಲ್ಲೆಯ ಸಿಎಂ ಹಾಗೂ ಎಲ್ಲಾ ಶಾಸಕರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಕಡಲ್ಕೊರೆತ ತಡೆಗಟ್ಟಲು ಎಡಿಬಿಯಿಂದ ಕೈಗೊಳ್ಳಲಾದ ಕಾಮಗಾರಿಗಳು ಕಳಪೆಯಾಗಿರುವ ನಿಟ್ಟಿನಲ್ಲಿ ತನಿಖೆ ನಡೆಸಲು ಸೂಚನೆ ನೀಡಿದರು.
ಸಭೆಗೆ ಗೈರುಹಾಜರಾಗಿದ್ದ ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿಯವರಿಗೆ ಆರ್. ಅಶೋಕ್ ಸೂಚನೆ ನೀಡಿದರು.
Kshetra Samachara
07/07/2022 10:39 pm