ವರದಿ: ರಹೀಂ ಉಜಿರೆ
ಬೈಂದೂರು : ಜಿಲ್ಲೆಯಲ್ಲಿ ವರುಣನ ಅಬ್ಬರ ಮುಂದುವರಿದ್ದು ಇಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಬೈಂದೂರು ತಾಲೂಕಿಲ್ಲಿ ಮಳೆರಾಯನ ಅಬ್ಬರಕ್ಕೆ ಒಂದಡೆ ನೆರೆ ಹಾವಳಿಯಾದರೆ ಇನ್ನೊಂದೆಡೆ ಕಡಲ್ಕೊರೆತ ತೀವ್ರಗೊಂಡಿದೆ. ನಿನ್ನೆ ನೆರೆಹಾವಳಿಯಿಂದ ತತ್ತರಿಸಿದ ಜನ ಕೋಟದಲ್ಲಿ ಪ್ರತಿಭಟನೆಗೆ ಇಳಿದರೆ ಇಂದು ಮರವಂತೆಯಲ್ಲಿ ಕಡಲ್ಕೊರೆತ ವೀಕ್ಷಿಸಲು ಬಂದ ಸಂಸದರ ಜೊತೆ ಅಸನಾಧಾನ ಹೊರಹಾಕಿದ್ದಾರೆ.
ಇಂದು ಜಿಲ್ಲೆಯಾದ್ಯಂತ ಬಹುತೇಕ ತಾಲೂಕುಗಳಲ್ಲಿ ಮಳೆರಾಯನ ಅಬ್ಬರ ಜೋರಾಗಿದೆ. ಮುಂಜಾನೆ ಕೆಲವೆಡೆ ಮಳೆಗೆ ಬ್ರೇಕ್ ಸಿಕ್ಕಿದ್ದರೂ ಮಧ್ಯಾಹ್ನದ ಬಳಿಕ ಒಂದೇ ಸಮನೆ ವರ್ಷಧಾರೆಯಾಗುತ್ತಿದೆ. ಕೋಟ ಭಾಗದಲ್ಲಿ ರಾತ್ರಿ ಮಳೆ ನಿಂತಿದ್ದ ಕಾರಣ ನೆರೆ ಇಳಿಮುಖವಾಗಿತ್ತು. ಬನ್ನಾಡಿ, ಉಪ್ಲಾಡಿ, ಬೆಟ್ಲಕ್ಕಿ ಭಾಗಗಲ್ಲಿ ಮನೆ ಬಿಡುವ ಯೋಜನೆಯಲ್ಲಿದ್ದ ಸ್ಥಳೀಯರಿಗೆ ನೆರೆ ಇಳಿಮುಖವಾಗಿರುವುದು ಕೊಂಚ ನೆಮ್ಮದಿ ತಂದಿದೆ.
ಆದರೆ, ಬೈಂದೂರು ತಾಲೂಕಿನಲ್ಲಿ ಹರಿಯುವ ಸೌಪರ್ಣಿಕಾ ನದಿ ಮಳೆಯಿಂದಾಗಿ ತುಂಬಿ ಹರಿಯುತ್ತಿದೆ. ಇದೇ ಪರಿಸರದ ಬಂಟ್ವಾಡಿ ಎಂಬಲ್ಲಿ ನಿರ್ಮಿಸಲಾಗುತ್ತಿರುವ ಅಣೆಕಟ್ಟಿ ನಿಂದ ಹೊಳೆ ನೀರು ಸರಾಗವಾಗಿ ಇಳಿಯದೆ ಕೃತಕ ನೆರೆಹಾವಳಿ ಸೃಷ್ಟಿಯಾಗಿದೆ. ನೆರೆ ಹಾವಳಿಯಿಂದ ನಾವುಂದ ಭಾಗದ ಸಾಲ್ಬುಡ, ಕುದ್ರು ಗ್ರಾಮದ ಜನ ಸಂಕಷ್ಟ ಎದುರಿಸುವಂತಾಗಿದ್ದು, ಸ್ಥಳೀಯರು ಮತ್ತು ಅಗ್ನಿಶಾಮಕ ದಳ ನೆರೆ ಹಾವಳಿ ಪ್ರದೇಶದ ಜನರ ರಕ್ಷಣೆ ನಡೆಸಿದ್ದಾರೆ. ಮನೆಯ ಕೊಟ್ಟಿಗೆಯಲ್ಲಿದ್ದ ದನಕರುಗಳನ್ನು ಸ್ಥಳೀಯರು ತೀರ ಪ್ರದೇಶಕ್ಕೆ ಸಾಗಿಸಿದ್ದು, ಕುದ್ರು ಮತ್ತು ಸಾಲ್ಬುಡ ಪ್ರದೇಶದಲ್ಲಿ 100ರಷ್ಡು ಮನೆಗಳು ಜಲಾವೃತವಾಗಿವೆ...
ಇನ್ನು ಸುಮಾರು 15 ದಿನಗಳಿಂದ ಕಡಲ್ಕೊರೆತದಿಂದ ಭಯದಿಂದಲೇ ದಿನ ಕಳೆತ್ತಿದ್ದ ಬೈಂದೂರು ತಾಲೂಕು ವ್ಯಾಪ್ತಿಯ ಕಿರಿಮಂಜೇಶ್ವರ ಮತ್ತು ಮರವಂತೆ ಪ್ರದೇಶಗಳಿಗೆ ಸಂಸದ ಬಿ.ವೈ.ರಾಘವೇಂದ್ರ ಇಂದು ಭೇಟಿ ನೀಡಿ ಪರಿಶೀಲಿಸಿದರು.ಈ ವೇಳೆ ಸ್ಥಳೀಯರು ತಮ್ಮ ಆಕ್ರೋಶ ಹೊರಹಾಕಿದರು.
ಒಟ್ಟಾರೆ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಹೊಳೆ, ನದಿ ಪಾತ್ರದ ಜನರ ಗೋಳು ಹೇಳತೀರದು. ಮಳೆ ಕಡಿಮೆಯಾದರೂ ಘಟ್ಟದ ನೀರು ಕೆಳಗೆ ಹರಿಯುವುದರಿಂದ ನದಿ ನೀರಿನ ಮಟ್ಟ ನಿರಂತರವಾಗಿ ಏರಿಕೆಯಾಗಿ ನೆರೆ ಹಾವಳಿ ಉಂಟಾಗುತ್ತಿದೆ.
Kshetra Samachara
07/07/2022 06:45 pm