ಬಂಟ್ವಾಳ: ಧಾರಾಕಾರ ಮಳೆಗೆ ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದ ನೇಲ್ಯಪಲ್ಕೆ ಪಕ್ಕದ ಮುಕ್ಕುಡ ಧಾರಾಕಾರ ಮಳೆಗೆ ಭೂಕುಸಿತ ಉಂಟಾಗಿದ್ದು, ಮನೆಯೊಂದರ ಮೇಲೆ ಮಣ್ಣು ಜರಿದು, ನಾಲ್ವರು ಕೇರಳ ಮೂಲದ ಕಾರ್ಮಿಕರು ಸಿಲುಕಿಕೊಂಡ ಘಟನೆ ಬುಧವಾರ ರಾತ್ರಿ ನಡೆದಿದೆ.
ಬಿಜು, ಬಾಬು, ಜೋನ್ ಮತ್ತು ಸಂತೋಷ್ ನಾಲ್ವರು ಕಾರ್ಮಿಕರು. ಇವರಲ್ಲಿ ಬಿಜು (46) ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಸಾವನ್ನಪ್ಪಿದ್ದರೆ, ಜೋನ್ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಹಾಗೂ ಬಾಬು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ಸುಮಾರು ಏಳು ಗಂಟೆ ವೇಳೆ ನಡೆದಿದೆ. ಈ ಜಾಗದ ಆಸುಪಾಸಿನಲ್ಲಿದ್ದ ಗುಡ್ಡವೊಂದು ಬಂಡೆಕಲ್ಲು ಸಮೇತ ಕುಸಿದು ಘಟನೆ ಸಂಭವಿಸಿದೆ. ಈ ಸಂದರ್ಭ ಮನೆಯಲ್ಲದೆ ಅಲ್ಲೇ ಇದ್ದ ಮಾರುತಿ ಕಾರೊಂದು ಜಖಂಗೊಂಡಿದೆ.
ಘಟನೆ ನಡೆದ ಕೂಡಲೇ ಕಾರ್ಯಪ್ರವೃತ್ತರಾದ ಸ್ಥಳೀಯರು, ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳೀಯರ ಸಹಾಯದಿಂದ ಕಾರ್ಯಾಚರಣೆ ನಡೆದಿದ್ದು, ಸುಮಾರು 9.30ರ ವೇಳೆ ಮೂವರನ್ನು ಹೊರಕ್ಕೆ ತರುವಲ್ಲಿ ಯಶಸ್ವಿಯಾಗಿದೆ. ಇವರ ಪೈಕಿ ಓರ್ವ ಮೃತಪಟ್ಟಿದ್ದಾನೆ. ನಾಲ್ಕನೇಯ ಕಾರ್ಮಿಕ ಸಿಲುಕಿಕೊಂಡಿದ್ದು ರಾತ್ರಿ 10 ಗಂಟೆಯ ವೇಳೆ ಸುರಿಯುವ ಮಳೆಯಲ್ಲೂ ಕಾರ್ಯಾಚರಣೆ ಮುಂದುವರಿಯಿತು.
PublicNext
06/07/2022 10:40 pm