ಮುಲ್ಕಿ: ಕಟೀಲು ಸಮೀಪದ ಎಕ್ಕಾರು ಮುಗೇರಬೆಟ್ಟು ಬೇಡೆ ಎಂಬಲ್ಲಿ ಚಿರತೆಯೊಂದು ಹಾಡುಹಗಲೇ ನಾಯಿಯನ್ನು ಬೇಟೆಯಾಡಲು ಯತ್ನಿಸಿದ್ದು ಸ್ಥಳೀಯರು ಬೊಬ್ಬೆ ಹಾಕಿದ್ದರಿಂದ ಚಿರತೆ ಪರಾರಿಯಾಗಿದ್ದು ಸಿಸಿ ಕ್ಯಾಮರಾದಲ್ಲಿ ದೃಶ್ಯ ದಾಖಲಾಗಿದೆ
ಎಕ್ಕಾರು ಬೇಡೆ ಸುಮತಿ ಎಂಬುವರ ಮನೆಯ ಮಕ್ಕಳು ಸಾಕು ನಾಯಿಯೊಂದಿಗೆ ಮನೆ ಸಮೀಪ ವಾಕಿಂಗ್ ಗೆ ತೆರಳಿದ್ದರು, ಈ ಸಂದರ್ಭ ಬೇಟೆಗಾಗಿ ಹೊಂಚು ಹಾಕುತ್ತಿದ್ದ ಚಿರತೆ ಸಾಕು ನಾಯಿಯನ್ನೇ ಬೇಟೆಯಾಡಲು ಪ್ರಯತ್ನಿಸಿದೆ,
ಕೂಡಲೇ ಮಕ್ಕಳು ಬೊಬ್ಬೆ ಹಾಕಿದ್ದು ಚಿರತೆ ನಾಯಿಯನ್ನು ಬಿಟ್ಟು ಓಡಿದೆ, ಮನೆಯ ಸುತ್ತಲೂ ಸಿ.ಸಿ.ಟಿವಿ ಹಾಕಲಾಗಿದ್ದು ಇದರಲ್ಲಿ ನಾಯಿಯನ್ನು ಚಿರತೆ ಅಟ್ಟಿಸಿಕೊಂಡು ಹೋಗುತ್ತಿರುವ ದೃಶ್ಯ ದಾಖಲಾಗಿದೆ.
ಕಳೆದ ಕೆಲ ತಿಂಗಳಿನಿಂದ ಎಕ್ಕಾರು ಪರಿಸರದಲ್ಲಿ ಚಿರತೆ ಕಾಟ ವಿಪರೀತವಾಗಿದ್ದು ಕೆಲ ದಿನಗಳ ಹಿಂದೆ ಎಕ್ಕಾರು ಅರಸುಲ ಪದವು ಬಳಿ ಮೇಯಲು ಬಿಟ್ಟ ಕರುವೊಂದನ್ನು ತಿಂದು ಹಾಕಿ ಸ್ಥಳದಲ್ಲಿ ಭಯಭೀತ ವಾತಾವರಣ ಸೃಷ್ಟಿಯಾಗಿತ್ತು ತಿಂಗಳ ಹಿಂದೆ ಇದೇ ಪರಿಸರದ ಸ್ಟ್ಯಾನಿ ಪಿಂಟೋ ಅವರ ಮನೆಯ ಅಂಗಳಕ್ಕೆ ಚಿರತೆ ಬಂದು ನಾಯಿಯನ್ನು ಎಳೆದುಕೊಂಡು ಹೋದದ್ದು ಸಿಸಿ ಟಿವಿಯಲ್ಲಿ ದಾಖಲಾಗಿತ್ತು.
ಎಕ್ಕಾರಿನ ವ್ಯಕ್ತಿಯೊಬ್ಬರ ಮನೆಯ ದನದ ಹಟ್ಟಿಗೆ ಬಂದು ದನವನ್ನು ಎಳೆದೊಯ್ಯಲು ಪ್ರಯತ್ನಿಸಿದ ಚಿರತೆ ಮನೆಯವರ ಬೊಬ್ಬೆಗೆ ಓಡಿಹೋಗಿತ್ತು. ಕೂಡಲೇ ಅರಣ್ಯಾಧಿಕಾರಿಗಳು ಕಾರ್ಯಪ್ರವೃತ್ತರಾಗಿ ಚಿರತೆ ಕಾಟ ತಪ್ಪಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.
Kshetra Samachara
15/08/2021 02:54 pm