ವರದಿ: ರಹೀಂ ಉಜಿರೆ
ಮಲ್ಪೆ: ಕೊರೋನಾ ಮತ್ತು ನಂತರದ ಲಾಕ್ ಡೌನ್ ನಿಂದಾಗಿ ಜನರು ತಿಂಗಳುಗಟ್ಟಲೇ ಮನೆಯಲ್ಲೇ ಉಳಿಯುವಂತಾಯುತು.ಆದರೆ ಎಷ್ಟು ಅಂತ ಮನೆಯೊಳಗೇ ಕೂರುವುದು? ಈ ಬಾರಿಯ ಎರಡನೇ ಲಾಕ್ ಡೌನ್ ನಂತರವಂತೂ ಪ್ರವಾಸಿಗರು ಅಕ್ಷರಶಃ ಮಲ್ಪೆ ಬೀಚ್ ನತ್ತ ಮುಖ ಮಾಡುತ್ತಿದ್ದಾರೆ.ಆದರೆ ಈ ಬೀಚ್ ಎಷ್ಟು ಸುರಕ್ಷಿತ?
ಸಮುದ್ರ ,ಕಡಲ ಕಿನಾರೆ ಎಂಬುದು ಎಲ್ಲರ ಆಕರ್ಷಣೆ ಕೇಂದ್ರ.ಕರಾವಳಿ ಜನರಿಗೆ ಬಿಡಿ ,ಬಯಲು ಸೀಮೆ ಜನ ,ಬೆಂಗಳೂರು ,ಮೈಸೂರಿನಂತಹ ಊರಿನ ಜನರಿಗೆ ಈ ಬೀಚ್ ನ ಆಕರ್ಷಣೆ ಇನ್ನೂ ಜಾಸ್ತಿ.ಇದೇ ಆಕರ್ಷಣೆ ಜೀವಕ್ಕೇ ಮುಳುವಾಗುತ್ತಿರುವ ಘಟನೆಗಳು ಇಲ್ಲಿ ನಡೆಯುತ್ತಲೇ ಇವೆ.ನಿನ್ನೆ ಕೊಡಗಿನಿಂದ ಬಂದ ಓರ್ವ ಯುವತಿ ಸಮುದ್ರಪಾಲಾಗಿ ಜೀವ ತೆತ್ತಿದ್ದಾಳೆ.ನಿಜಕ್ಕೂ ಈ ಸಾವು ನ್ಯಾಯವೇ? ಸಮುದ್ರಕ್ಕೆ ಇಳಿಯಬೇಡಿ ಎಂಬ ಎಚ್ಚರಿಕೆ ಫಲಕಗಳು ಇಲ್ಲಿ ಧಾರಾಳ ಇವೆ.ಒಂದಿಬ್ಬರು ಲೈಫ್ ಗಾರ್ಡ್ಸ್ ಕೂಡ ಇದ್ದಾರೆ.ಆದರೆ ಇವರ ಮಾತು ಧಿಕ್ಕರಿಸುವ ಪ್ರವಾಸಿಗರು ತಮ್ಮ ಪ್ರಾಣ ಕಳೆದುಕೊಳ್ಳುವ ಪ್ರಸಂಗಗಳು ನಡೆಯುತ್ತಲೇ ಇವೆ.ಹೀಗಾಗಿ ಇಲ್ಲಿ ಸ್ಥಳೀಯ ನುರಿತ ಈಜುಗಾರರು ಮತ್ತು ಕಾವಲುಗಾರರ ಸಂಖ್ಯೆ ಹೆಚ್ಚಿಸಬೇಕು ಎನ್ನುತ್ತಾರೆ ಪ್ರವಾಸಿಗರು
ದೂರದೂರುಗಳಿಂದ ಸಾವಿರಾರು ಸಂಖ್ಯೆಗಳಲ್ಲಿ ಪ್ರವಾಸಿಗರು ಕಡಲ ಅಲೆಗೆ ಮಾರು ಹೋಗಿ ನೀರಿಗಿಳಿಯುತ್ತಾರೆ.ನೀರಿಗಿಳಿದ ಮೇಲೆ ಮೈಮರೆತು ಮೋಜು ಮಸ್ತಿ ಮಾಡುತ್ತಾರೆ.ಇಂತಹ ಸಂದರ್ಭಗಳಲ್ಲಿ ಅಪಾಯಗಳಾದಾಗ ಏನು ಮಾಡುವುದು? ನಿಜ ಹೇಳಬೇಕೆಂದರೆ ಮಲ್ಪೆ ಬೀಚ್ ನಲ್ಲಿ ಅಗತ್ಯ ಸೌಲಭ್ಯ ಇಲ್ಲ: ಬೀಚ್‌ನಲ್ಲಿ ಅಪಾಯದ ಬಗ್ಗೆ ಫಲಕಗಳಿವೆ. ಈಗ ಇಬ್ಬರು ಹೋಂಗಾರ್ಡ್ಸ್‌ಗಳಿದ್ದಾರೆ. ಆದರೆ ಕಣ್ಣಮುಂದೆಯೇ ಅವಘಡಗಳು ನಡೆಯುವಾಗ ರಕ್ಷಿಸಲು ಒಂದು ರೋಪ್, ಸಣ್ಣ ಬೋಟ್ ಕೂಡ ಇಲ್ಲ. ಪ್ರವಾಸೋದ್ಯಮ ಇಲಾಖೆ ಮೊದಲು ರಕ್ಷಣೆ ಮತ್ತು ಭದ್ರತೆಗೆ ಒತ್ತು ನೀಡದೇ ಹೋದರೆ ಮಲ್ಪೆ ಬೀಚ್ ಇನ್ನಷ್ಟು ಬಲಿ ಪಡೆಯುವುದರಲ್ಲಿ ಸಂಶಯವಿಲ್ಲ.
ಈ ಮೊದಲು ಜಿಲ್ಲಾಧಿಕಾರಿ ಜೊತೆ ನಡೆದ ಮಲ್ಪೆ ಅಭಿವೃದ್ದಿ ಸಮಿತಿ ಸಭೆಯಲ್ಲಿ ಪ್ರವಾಸಿಗರ ಸುರಕ್ಷತೆ ಪ್ರಥಮ ಆದ್ಯತೆಯಾಗಿರಬೇಕು. ಇರುವ ಜೀವರಕ್ಷಕರ ಜತೆಗೆ ಹೆಚ್ಚುವರಿ ಐದು ಮಂದಿಯನ್ನು ನೇಮಿಸಬೇಕು ಎಂದು ಸೂಚಿಸಲಾಗಿತ್ತು.ದುರದೃಷ್ಟವಶಾತ್ ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಇನ್ನಾದರೂ ಸಂಬಂಧಪಟ್ಟವರು ಇತ್ತ ಕಡೆ ಗಮನ ಹರಿಸಬೇಕಿದೆ.
Kshetra Samachara
03/08/2021 09:58 pm