ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕಾರ್ ಸ್ಟ್ರೀಟ್ ಶ್ರೀ ವೆಂಕಟರಮಣ ದೇವಳ ಸನಿಹದ ಅಶ್ವತ್ಥ ವೃಕ್ಷ ಇನ್ನಿಲ್ಲ!

ಮಂಗಳೂರು: ಮಂಗಳೂರಿನ ಕಾರ್ ಸ್ಟ್ರೀಟ್ ನಲ್ಲಿರುವ ಸುಪ್ರಸಿದ್ಧ ಶ್ರೀ ವೆಂಕಟರಮಣ ದೇವಾಲಯ ಬಳಿಯ ಬೃಹತ್ ಅಶ್ವತ್ಥ ಮರ ಇದ್ದಕ್ಕಿದ್ದಂತೆಯೇ ನೆಲಕ್ಕುರುಳಿದೆ.

ಮಂಗಳೂರಿನ ರಥಬೀದಿಯಲ್ಲಿ ಅನೇಕ ವರ್ಷಗಳಿಂದ ಸಾರ್ವಜನಿಕರ ಪ್ರಮುಖ ಆಕರ್ಷಣೆ ಹಾಗೂ ಭಕ್ತಜನರ ಪೂಜನೀಯ ಕೇಂದ್ರವಾಗಿಯೂ ಈ ಪವಿತ್ರ ಬೃಹತ್ ವೃಕ್ಷ ರಾರಾಜಿಸುತ್ತಿತ್ತು.

ದೇವಾಲಯದ ನಾನಾ ಉತ್ಸವದ ಸಂದರ್ಭದಲ್ಲಿಯಂತೂ ಪೂಜಾ ಸೇವಾ ಕೈಂಕರ್ಯಗಳಿಗೆ ಈ ರಾಜ ವೃಕ್ಷ ಸಾಕ್ಷಿಯಾಗಿರುತ್ತಿತ್ತು.

ಇಂದು ಬೆಳಿಗ್ಗೆ ಈ ಮಹಾಮರ ಆಕಸ್ಮಾತ್ ಆಗಿ ಬಳಲಿ ಕುಸಿದಂತೆ ಭೂಮಿ ತಾಯಿಯ ಪಾದ ಕಮಲಗಳಿಗೆ ಮತ್ತೆ ಏಳಲಾರೆನೆಂದು ಬಿದ್ದು ಬಿಟ್ಟಿತು!

ವೃಕ್ಷದೇವತೆ ಇದ್ದಕ್ಕಿದ್ದಂತೆಯೇ ಧರೆಗುರುಳಿದ ಸಂದರ್ಭ ಸಮೀಪದಲ್ಲಿದ್ದ ನೀರಿನ ಟ್ಯಾಂಕ್, ಜೆಸಿಬಿ ಹಾಗೂ ಕೆಲ ವಾಹನಗಳಿಗೆ ಚಿಕ್ಕಪುಟ್ಟ ಹಾನಿಯುಂಟಾಗಿದೆ.

300 ವರ್ಷಗಳ ಹಳೆಯ ವೃಕ್ಷ!: ಈ ಅಶ್ವತ್ಥ ಮರ ಸುಮಾರು 300 ವರ್ಷಗಳಷ್ಟು ಹಳೆಯದು. ಸಾಕಷ್ಟು ಜನಸಂಚಾರವಿರುವ ಸ್ಥಳವಾದರೂ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ, ಮರದಡಿಯಲ್ಲಿದ್ದ ತಲಾ ಒಂದೊಂದು ಕಾರು, ವಾಟರ್ ಸಪ್ಲೈ ಟ್ಯಾಂಕರ್, ಕ್ರೈನ್ ಗೆ ಭಾಗಶಃ ಹಾನಿಯಾಗಿದೆ‌.

ಬೆಳಗ್ಗೆ 8 ಗಂಟೆ ಸುಮಾರಿಗೆ ಅಲ್ಲಿದ್ದ ಹೆಚ್ಚಿನವರಿಗೆ ಕಿರ್ರೆಂಬ ಶಬ್ದ ಕೇಳಿದ್ದು, ನೋಡು ನೋಡುತ್ತಿದ್ದಂತೆ ಮರ ಅಚಾನಕ್ ರಸ್ತೆ ಕಡೆ ವಾಲಿಕೊಂಡು ಧರಾಶಾಯಿಯಾಯಿತು. ಮರ ಇನ್ನೊಂದು ಕಡೆ ಉರುಳುತ್ತಿದ್ದರೆ ಶ್ರೀ ವೆಂಕಟರಮಣ ದೇಗುಲ, ಸ್ಕೂಲ್ ಬುಕ್ ಕಂಪೆನಿ ಕಟ್ಟಡ ಸೇರಿ ಮತ್ತೊಂದು ಸಣ್ಣ ಕಟ್ಟಡಕ್ಕೂ ಹಾನಿಯಾಗುತ್ತಿತ್ತು. ಅದೃಷ್ಟವಶಾತ್ ಮರ ರಸ್ತೆಯ ಕಡೆ ಉರುಳಿರುವ ಪರಿಣಾಮ ಭಾರಿ ಅನಾಹುತ ತಪ್ಪಿದಂತಾಗಿದೆ.

ಸಾಕಷ್ಟು ಧಾರ್ಮಿಕ ಹಿನ್ನೆಲೆ ಇರುವ‌ ಈ ಮರ ಶ್ರೀ ವೆಂಕಟರಮಣ ದೇಗುಲದ ರಥೋತ್ಸವ ಸೇರಿ, ಸಾರ್ವಜನಿಕ ಸತ್ಯನಾರಾಯಣ ಪೂಜೆ, ಸಾರ್ವಜನಿಕ ಶನಿಪೂಜೆ, ಸಾರ್ವಜನಿಕ ಯಕ್ಷಗಾನ ಬಯಲಾಟ ಮುಂತಾದ ಸಾಕಷ್ಟು ಧಾರ್ಮಿಕ- ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾಕ್ಷೀಭೂತವಾಗಿತ್ತು.

Edited By : Manjunath H D
Kshetra Samachara

Kshetra Samachara

24/01/2021 12:45 pm

Cinque Terre

22.92 K

Cinque Terre

2